ಡೆನ್ಮಾರ್ಕ್ ಓಪನ್: ಫೈನಲ್‌ನಲ್ಲಿ ಸೈನಾಗೆ ಸೋಲು

Update: 2018-10-21 12:42 GMT

ಒಡೆನ್ಸ್, ಅ.21: ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ಡೆನ್ಮಾರ್ಕ್ ಓಪನ್ ಪ್ರಶಸ್ತಿ ಗೆಲ್ಲುವ ಕನಸು ಕೈಗೂಡಲಿಲ್ಲ. ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸೈನಾ ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ ವಿರುದ್ಧ 13-21, 21-13, 6-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿ ಸೂಪರ್ ಸರಣಿ ಫೈನಲ್‌ನಲ್ಲಿ ಆಡಿದ ಸೈನಾ ಅವರು ಚೈನೀಸ್ ತೈಪೆ ಆಟಗಾರ್ತಿ ವಿರುದ್ಧ ಸೋಲಿನ ಸರಪಳಿ ತುಂಡರಿಸಿಕೊಳ್ಳಲು ಮತ್ತೊಮ್ಮೆ ವಿಫಲರಾದರು. ಯಿಂಗ್ ಅವರು ಸೈನಾ ವಿರುದ್ಧ ಆಡಿರುವ 18 ಪಂದ್ಯಗಳಲ್ಲಿ 13ನೇ ಗೆಲುವು ದಾಖಲಿಸಿದರು.

ಭಾರತದ ಶಟ್ಲರ್ ಸೈನಾ 2013ರಲ್ಲಿ ಕೊನೆಯ ಬಾರಿ ತೈ ಝು ಯಿಂಗ್ ಅವರನ್ನು ಸೋಲಿಸಿದ್ದರು. ಆ ನಂತರ ಸೈನಾ ಅವರು ಯಿಂಗ್ ವಿರುದ್ಧ ಆಡಿರುವ ಕಳೆದ 11 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.

ಸೈನಾ ಮೊದಲ ಗೇಮ್‌ನ್ನು ತಪ್ಪು ಸರ್ವ್‌ನಿಂದ ಆರಂಭಿಸಿದರು. ತೈ ಝು ಆರಂಭದಲ್ಲೇ 4-1 ಮುನ್ನಡೆ ಸಾಧಿಸಿದರು. ವಿರಾಮದ ವೇಳೆಗೆ 11-5 ಮುನ್ನಡೆ ಕಾಯ್ದುಕೊಂಡರು. ವಿರಾಮದ ಬಳಿಕ ತೈ ಮೇಲುಗೈ ಸಾಧಿಸಿದ್ದು, ಸೈನಾ ನಿರಂತರ ತಪ್ಪೆಸಗುವ ಮೂಲಕ ತೈಗೆ ನೆರವಾದರು. ತೈ 15 ನಿಮಿಷಗಳಲ್ಲಿ ಮೊದಲ ಗೇಮ್‌ನ್ನು 21-13 ಅಂತರದಿಂದ ಗೆದ್ದುಕೊಂಡರು.

 ಸೈನಾ ಎರಡನೇ ಗೇಮ್‌ನ್ನು 3-1 ಮುನ್ನಡೆಯೊಂದಿಗೆ ಆರಂಭಿಸಿದರು. ವಿನ್ನಿಂಗ್‌ಪಾಯಿಂಟ್ ಬಳಿಕ ತನ್ನ ಮುನ್ನಡೆಯನ್ನು 7-3ಕ್ಕೆ ವಿಸ್ತರಿಸಿದರು. ತೈ ಅವರ ನಿರಂತರ ತಪ್ಪಿನ ನೆರವಿನಿಂದ ಸೈನಾ ಮುನ್ನಡೆಯನ್ನು 9-4ಕ್ಕೆ ವಿಸ್ತರಿಸಿಕೊಂಡರು. ಆರು ಅಂಕದ ಲಾಭದೊಂದಿಗೆ ಸೈನಾ ಬ್ರೇಕ್ ವೇಳೆಗೆ 11-5 ಲೀಡ್ ಪಡೆದರು.

ಸತತ ಮೂರು ಅಂಕ ಗಳಿಸಿದ ತೈ ಹಿನ್ನಡೆಯನ್ನು ತಗ್ಗಿಸಿಕೊಂಡರು. ಅಂತಿಮವಾಗಿ ಸೈನಾ ಎರಡನೇ ಗೇಮ್‌ನ್ನು 21-13 ಅಂತರದಿಂದ ಗೆದ್ದುಕೊಂಡು ಸಮಬಲ ಸಾಧಿಸಿದರು.

  ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಸತತ 9 ಅಂಕ ಗಳಿಸಿದ ತೈ 11-2 ಮುನ್ನಡೆ ಪಡೆದರು. ವಿರಾಮದ ಬಳಿಕವೂ ತೈ ತನ್ನ ಮುನ್ನಡೆ ಕಾಯ್ದುಕೊಂಡರು. ತೈ ಅವರಷ್ಟು ವೇಗವಾಗಿ ಆಡಲು ವಿಫಲವಾದ ಸೈನಾ 3ನೇ ಗೇಮ್‌ನ್ನು 6-21 ಅಂತರದಿಂದ ಸೋತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News