ಅರೆಸೇನಾಪಡೆಯಲ್ಲಿ 61 ಸಾವಿರ ಹುದ್ದೆ ಖಾಲಿ : ಗೃಹ ಇಲಾಖೆಯ ವರದಿ

Update: 2018-10-21 13:34 GMT

ಹೊಸದಿಲ್ಲಿ, ಅ.21: ಕೇಂದ್ರ ಅರೆಸೇನಾ ಪಡೆಯಲ್ಲಿ 61 ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿಯಿವೆ ಎಂದು ಗೃಹ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿಅಂಶ ತಿಳಿಸಿದೆ.

ದೇಶದಲ್ಲಿರುವ 6 ಅರೆಸೇನಾ ಪಡೆಗಳ ಪೈಕಿ ಅತ್ಯಂತ ದೊಡ್ಡ ಸೇನಾಪಡೆಯಾಗಿರುವ ಸಿಆರ್‌ಪಿಎಫ್‌ನಲ್ಲಿ 2018ರ ಮಾರ್ಚ್ 1ಕ್ಕೆ ಅನ್ವಯಿಸಿ 18,460 ಹುದ್ದೆ ಖಾಲಿಯಿದ್ದರೆ ಬಿಎಸ್‌ಎಫ್‌ನಲ್ಲಿ 10,738 ಹುದ್ದೆ ಖಾಲಿಯಿದೆ. ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದಲ್ಲಿ 18,942, ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ)ನಲ್ಲಿ 5,786 , ಅಸ್ಸಾಂ ರೈಫಲ್ಸ್‌ನಲ್ಲಿ 3,840, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಎಸ್‌ಎಫ್)ನಲ್ಲಿ 3,812 ಹುದ್ದೆ ಖಾಲಿಯಿವೆ.

ನಿವೃತ್ತಿ, ರಾಜೀನಾಮೆ, ನೂತನ ಹುದ್ದೆಗಳನ್ನು ಹಾಗೂ ಹೊಸ ಬಟಾಲಿಯನ್‌ಗಳನ್ನು ರೂಪಿಸಿರುವುದು ಖಾಲಿಹುದ್ದೆಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ . ನೇಮಕಾತಿ ನಿಯಮಗಳ ಅನುಸಾರ ನೇರ ನೇಮಕಾತಿ, ಭಡ್ತಿ, ನಿಯೋಜನೆ ಮೂಲಕ ಹುದ್ದೆಗಳನ್ನು ಭರ್ತಿಗೊಳಿಸಲಾಗುತ್ತಿದ್ದು ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಆಂತರಿಕ ಭದ್ರತಾ ಕಾರ್ಯದಲ್ಲಿ ರಾಜ್ಯಗಳ ಪೊಲೀಸರಿಗೆ ನೆರವಾಗಲು ಸಿಆರ್‌ಪಿಎಫ್ ಪಡೆಯನ್ನು ನಿಯೋಜಿಸಲಾಗುತ್ತದೆ. ಜಮ್ಮು-ಕಾಶ್ಮೀರದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದಕರನ್ನು ನಿಗ್ರಹಿಸಲು, ಮಾವೋವಾದಿ ನಕ್ಸಲರ ಚಟುವಟಿಕೆಯಿಂದ ಬಾಧಿತವಾದ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಕ್ಕೆ ಸಿಆರ್‌ಸಿಎಫ್ ಪಡೆ ನಿಯೋಜಿಸಲಾಗುತ್ತದೆ. ಬಿಎಸ್‌ಎಫ್ ಪಡೆ ಭಾರತ-ಪಾಕ್ ಗಡಿ, ಭಾರತ-ನೇಪಾಳ ಗಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಎಸ್‌ಎಸ್‌ಬಿ ಭಾರತ-ನೇಪಾಳ, ಭಾರತ-ಭೂತಾನ್ ಗಡಿಯಲ್ಲಿ, ಐಟಿಬಿಪಿ ಭಾರತ- ಚೀನಾ ಗಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಿಐಎಸ್‌ಎಫ್ ವಿಮಾನ ನಿಲ್ದಾಣ, ಪರಮಾಣು ಸ್ಥಾವರ ಹಾಗೂ ಕೈಗಾರಿಕೆಗಳು, ಸೂಕ್ಷ್ಮ ಸರಕಾರಿ ಕಟ್ಟಡಗಳು, ದಿಲ್ಲಿ ಮೆಟ್ರೋ ಹಾಗೂ ಇತರ ಭದ್ರತಾ ವ್ಯವಸ್ಥೆ ನಿರ್ವಹಿಸುತ್ತದೆ.

ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರನ್ನು ನಿಗ್ರಹಿಸಲು, ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಭದ್ರತಾ ಕಾರ್ಯವನ್ನು ಅಸ್ಸಾಂ ರೈಫಲ್ಸ್ ನಿರ್ವಹಿಸುತ್ತದೆ. ಈ ಮೂರೂ ಪಡೆಗಳಲ್ಲಿ ಒಟ್ಟು ಸುಮಾರು 10 ಲಕ್ಷ ಯೋಧರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News