ಮದ್ಯಪ್ರದೇಶ ಚುನಾವಣೆ: ಪ್ರಚಾರದಲ್ಲಿ ಜಾದೂಗಾರರ ಬಳಕೆಗೆ ಬಿಜೆಪಿ ಚಿಂತನೆ

Update: 2018-10-21 15:38 GMT

ಭೋಪಾಲ್, ಅ. 21: ಮಧ್ಯಪ್ರದೇಶದಲ್ಲಿ ನಿರಂತರ ನಾಲ್ಕನೇ ಅವಧಿ ಕೂಡ ಅಧಿಕಾರಕ್ಕೆ ಬರುವ ಗುರಿ ಇರಿಸಿರುವ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಾದುಗಾರರನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದೆ.

 ಕಳೆದ 15 ವರ್ಷಗಳಲ್ಲಿ ಬಿಜೆಪಿ ಮಾಡಿದ ಕೆಲಸಗಳ ಬಗ್ಗೆ ಬೆಳಕು ಚೆಲ್ಲಲು ಹಾಗೂ ಈ ಹಿಂದಿನ ಕಾಂಗ್ರೆಸ್ ಸರಕಾರದೊಂದಿಗೆ ಹೋಲಿಕೆ ಮಾಡಲು ಜಾದೂಗಾರರನ್ನು ಬಳಸಿಕೊಳ್ಳಲು ಪಕ್ಷ ಚಿಂತಿಸುತ್ತಿದೆ ಎಂದು ಮಧ್ಯಪ್ರದೇಶದ ಬಿಜೆಪಿ ವಕ್ತಾರ ರಜನೀಶ್ ಅಗರ್‌ವಾಲ್ ಹೇಳಿದ್ದಾರೆ.

‘‘ಅಭಿಯಾನ ಹಾಗೂ ಪ್ರಚಾರದಲ್ಲಿ ಜಾದೂಗಾರರನ್ನು ಬಳಸಿಕೊಳ್ಳಲು ನಾವು ಯೋಚಿಸುತ್ತಿದ್ದೇವೆ. ಮತದಾರರನ್ನು ತಲುಪಲು ಮಾರುಕಟ್ಟೆ ಪ್ರದೇಶಗಳಲ್ಲಿ ಜಾದು ಪ್ರದರ್ಶಿಸಲಾಗುವುದು. ಮುಖ್ಯವಾಗಿ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿ ಜಾದೂ ಪದರ್ಶನ ಏರ್ಪಡಿಸಲಾಗುವುದು’’ ಎಂದು ಅಗರ್‌ವಾಲ್ ಹೇಳಿದ್ದಾರೆ.

 ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವ ಜಾದೂಗಾರರ ಸಂಖ್ಯೆ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕು. ಆದರೆ, ಶೀಘ್ರದಲ್ಲಿ ಜಾದು ಪ್ರದರ್ಶನ ಆರಂಭಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಈ ಚಟುವಟಿಕೆಗಳಿಗೆ ಬಜೆಟ್ ಮಂಜೂರು ಮಾಡುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.

‘‘ಈ ಕಲೆಯ ಮುಖಾಂತರ ಬಿಜೆಪಿ ಸರಕಾರ ಜನರಿಗೆ ಏನು ಮಾಡಿದೆ ಎಂದು ಹೇಳಲಿದ್ದೇವೆ. ಮುಖ್ಯವಾಗಿ ಕಳೆದ 15 ವರ್ಷಗಳಿಂದ ಮಧ್ಯಪ್ರದೇಶದ ಸಮಾಜ ದುರ್ಬಲ ವರ್ಗಗಳಿಗೆ ಏನು ಮಾಡಿದೆ ಎಂದು ಜಾದೂ ಮೂಲಕ ತಿಳಿಸಲಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ 1993ರಿಂದ 2003ರ ವರೆಗೆ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದ 10 ವರ್ಷಗಳ ಆಡಳಿತದಲ್ಲಿ ಮೂಲ ಸೌಕರ್ಯಗಳ ಹಾಗೂ ರಸ್ತೆ, ವಿದ್ಯುತ್ ಪೂರೈಕೆಯಲ್ಲಿ ಹೀನಾಯ ಸ್ಥಿತಿಯ ಬಗ್ಗೆ ಜಾದು ಬೆಳಕು ಚೆಲ್ಲಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News