ಮಾಜಿ ಸಿಎಂ ಎನ್.ಡಿ. ತಿವಾರಿ ಪಾರ್ಥಿವ ಶರೀರದ ಎದುರು ನಕ್ಕ ಆದಿತ್ಯನಾಥ್, ಸಚಿವರು: ಬಿಜೆಪಿಗೆ ಮುಖಭಂಗ

Update: 2018-10-21 16:18 GMT

 ಲಕ್ನೋ, ಅ. 21: ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ಅವರ ಪಾರ್ಥಿವ ಶರೀರದ ಎದುರು ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಇತರ ಸಚಿವರು ಜೋರಾಗಿ ನಗುತ್ತಿರುವ ವೀಡಿಯೊ ಬಿಜೆಪಿ ಹಾಗೂ ಉತ್ತರ ಪ್ರದೇಶ ಸರಕಾರಕ್ಕೆ ತೀವ್ರ ಮುಖಭಂಗ ಉಂಟು ಮಾಡಿದೆ.

ಎನ್.ಡಿ. ತೀವಾರಿ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ಲಕ್ನೊಗೆ ಕೊಂಡೊಯ್ಯಲಾಗಿತ್ತು. ಹಿರಿಯ ರಾಜಕಾರಣಿ ಯಾಗಿರುವುದರಿಂದ ಅನಂತರ ಅಂತಿಮ ದರ್ಶನಕ್ಕೆ ಉತ್ತರಪ್ರದೇಶ ವಿಧಾನ ಸಭೆಯಲ್ಲಿ ಇರಿಸಲಾಗಿತ್ತು.

   ಮೊದಲ ಸಾಲಿನಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್, ಬಿಹಾರದ ರಾಜ್ಯಪಾಲ ಲಾಲಾಜಿ ಟಂಡನ್ ಹಾಗೂ ಹಿಂದಿನ ಸಾಲಿನಲ್ಲಿ ಉತ್ತರಪ್ರದೇಶದ ಸಚಿವ ಮೊಹ್ಸಿನ್ ರಝಾ ಹಾಗೂ ಅಸುತೋಷ್ ಟಂಡನ್ ನಗುತ್ತಿರುವ ವೀಡಿಯೊ ವೈರಲ್ ಆಗಿದೆ.

 ಎನ್.ಡಿ. ತಿವಾರಿ ಅವರ ಪಾರ್ಥಿವ ಶರೀರದ ಸಮೀಪ ಇದ್ದ ಆದಿತ್ಯನಾಥ್ ಅವರು ಟಂಡನ್, ರಾಜಾ ಹಾಗೂ ಟಂಡನ್ ಜೊತೆಗೆ ಚರ್ಚೆ ಮಾಡುತ್ತಿರುವುದು, ಎಲ್ಲರೂ ಗಟ್ಟಿಯಾಗಿ ನಗುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಅವರ ವರ್ತನೆಯನ್ನು ಖಂಡಿಸಿರುವ ಕಾಂಗ್ರೆಸ್ ವಕ್ತಾರ ಝಿಶಾನ್ ಹೈದರ್, ‘‘ಇಂತಹ ಕಾರ್ಯಕ್ರಮಗಳು ಕೇವಲ ಫೋಟೊ ತೆಗೆಸಿಕೊಳ್ಳುವ ಅವಕಾಶ ಎಂದು ಪರಿಗಣಿಸ ಕೂಡದು. ಅದು ಅಟಲ್ ಬಿಹಾರಿ ವಾಜಪೇಯಿ ಅಥವಾ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ಅವರದ್ದಾಗಿರಲಿ. ಇದು ಬಿಜೆಪಿಗೆ ಕೇವಲ ಕಾರ್ಯಕ್ರಮ. ಮೃತದೇಹದ ಎದುರು ಕುಳಿತು ಗಟ್ಟಿಯಾಗಿ ನಕ್ಕ ಅವರ ಅಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬಹುದು’’ ಎಂದಿದ್ದಾರೆ.

ಸಮಾಜವಾದಿ ಪಕ್ಷ ಕೂಡ ಅವರ ವರ್ತನೆ ಖಂಡಿಸಿದೆ. ‘‘ಇದು ಬಿಜೆಪಿಯ ನಿಜವಾದ ವ್ಯಕ್ತಿತ್ವ. ಮೃತದೇಹದ ಎದುರು ಮುಖ್ಯಮಂತ್ರಿ ಹಾಗೂ ಇತರ ಸಚಿವರು ಜೋರಾಗಿ ನಕ್ಕಿದ್ದಾರೆ. ಇದು ಅವರು ಎಷ್ಟು ಅಸೂಕ್ಷ್ಮರು ಹಾಗೂ ಮಾನವೀಯತೆ ಇಲ್ಲದವರು ಎಂಬುದು ಗೊತ್ತಾಗುತ್ತದೆ’’ ಎಂದು ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದಾವುರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News