‘ಕಿರುಕುಳದ ಕಥೆಗಳು ನನ್ನನ್ನು ಸಿಟ್ಟಿಗೆಬ್ಬಿಸುತ್ತಿವೆ’

Update: 2018-10-21 16:26 GMT

ಮುಂಬೈ,ಅ.21: ಭಾರತದ ‘ಮೀ ಟೂ’ ಅಭಿಯಾನವನ್ನು ಬೆಂಬಲಿಸಿರುವ ಬಾಲಿವುಡ್‌ನ ಹಿರಿಯ ನಟಿ ರವೀನಾ ಟಂಡನ್ ಅವರು,ತಾನು ಲೈಂಗಿಕ ಕಿರುಕುಳಗಳಿಗೆ ಬಲಿಪಶುವಾಗಿರಲಿಲ್ಲವಾದರೂ ಮಹಿಳೆಯರೊಂದಿಗೆ ಅನುಚಿತ ವರ್ತನೆಯ ಅಗಣಿತ ಕಥೆಗಳು ತನ್ನನ್ನು ಸಿಟ್ಟಿಗೆಬ್ಬಿಸಿವೆ ಎಂದು ಹೇಳಿದ್ದಾರೆ.

ತಾನು ಚಿತ್ರರಂಗದಲ್ಲಿ ವೃತ್ತಿಪರ ಕಿರುಕುಳಗಳನ್ನು ಅನುಭವಿಸಿದ್ದೇನೆ,ಹೀಗಾಗಿ ಈ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ನುಡಿದರು.

ತಾನು ತಿರುಗೇಟು ನೀಡುವ ಸ್ಥೈರ್ಯವನ್ನು ಹೊಂದಿದ್ದೆ,ಹೀಗಾಗಿ ತಾನೆಂದೂ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರಲಿಲ್ಲ. ಆದರೆ ಈ ಎಳೆಯ ಮಹಿಳೆಯರ ನೋವನ್ನು ತಾನು ಊಹಿಸಬಲ್ಲೆ. ಇಂತಹ ಕಥೆಗಳನ್ನು ಕೇಳುವುದು ವಿಷಾದನೀಯವಾಗಿದೆ ಎಂದ ಅವರು,ತಾನು ವೃತ್ತಿಪರ ಕಿರುಕುಳಗಳನ್ನು ಅನುಭವಿಸಿದ್ದೇನೆ. ಅದರಿಂದಾಗಿಯೇ ಒಂದೆರಡು ಚಿತ್ರಗಳನ್ನು ಕಳೆದುಕೊಂಡಿದ್ದೆ. ಕೆಲವು ಮಹಿಳಾ ಪತ್ರಕರ್ತರಿದ್ದು,ಅವರು ತಮ್ಮ ಮ್ಯಾಗಝಿನ್ ಮತ್ತು ವೃತ್ತಪತ್ರಿಕೆಗಳಲ್ಲಿ ನಟಿಯರ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದರು. ನಟಿಯರನ್ನು ಸುಳ್ಳುಗಾರ್ತಿಯರು ಎಂದು ಬಣ್ಣಿಸಿ ನಾಯಕ ನಟರಿಗೆ ನೆರವಾಗುತ್ತಿದ್ದರು ಎಂದರು.

 ತನ್ನ ಕಿರುಕುಳದ ಅನುಭವಗಳ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಟಂಡನ್,ತನ್ನ ವರ್ಚಸ್ಸಿಗೆ ಕಳಂಕ ಹಚ್ಚಲಾಗಿತ್ತು ಮತ್ತು ಅದೊಂದು ಆತಂಕಕಾರಿ ಘಟ್ಟವಾಗಿತ್ತು. ಅವರು ನಟಿಯರ ಬದುಕನ್ನು ಹಾಳು ಮಾಡಲು ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಯಾವುದೇ ಪತ್ರಕರ್ತೆಯನ್ನು ಹೆಸರಿಸದೆ ಹೇಳಿದರು.

 ಕೆಲಸದ ಸ್ಥಳದಲ್ಲಿ ಕಿರುಕುಳವೆಂದರೇನು? ಹೆಚ್ಚಿನ ಪ್ರಕರಣಗಳಲ್ಲಿ ನಟರು ನಟಿಯರ ಬದುಕನ್ನು ಹಾಳು ಮಾಡುತ್ತಿದ್ದಾಗ ಅವರ ಪತ್ನಿಯರು ಅಥವಾ ಸ್ನೇಹಿತೆಯರು ಮೌನ ಪ್ರೇಕ್ಷಕರಾಗಿರುತ್ತಾರೆ ಅಥವಾ ಅದಕ್ಕೆ ಕುಮ್ಮಕ್ಕು ನೀಡುತ್ತಾರೆ ಎಂದು ಟಂಡನ್ ಇತ್ತೀಚಿಗೆ ಕಟುವಾಗಿ ಟ್ವೀಟಿಸಿದ್ದರು.

ಈ ಕುರಿತು ಪ್ರಶ್ನೆಗೆ ರವೀನಾ,ಕೆಲವೊಮ್ಮೆ ತಮ್ಮ ಅಭದ್ರತೆಯಿಂದ ಅಥವಾ ವೃತ್ತಿಪರ ಅಸೂಯೆಯಿಂದ ಮಹಿಳೆಯರೂ ಈ ವೃತ್ತಿಪರ ಕಿರುಕುಳದಲ್ಲಿ ಶಾಮೀಲಾಗಿರುತ್ತಾರೆ ಮತ್ತು ತಮ್ಮ ಹಿರೋ ಬಾಯ್‌ಫ್ರೆಂಡ್ ಅಥವಾ ಪತಿಯೊಂದಿಗೆ ಸೇರಿಕೊಂಡು ಇತರ ನಟಿಯರನ್ನು ಚಿತ್ರಗಳಿಂದ ಹೊರದಬ್ಬಿಸುತ್ತಾರೆ. ಇದು ನ್ಯಾಯವಲ್ಲ ಎಂದು ಉತ್ತರಿಸಿದರು. ಅದು ಲೈಂಗಿಕ ಕಿರುಕುಳ ಅಲ್ಲದಿರಬಹುದು,ಆದರೆ ವೃತ್ತಿಪರ ಕಿರುಕುಳವಾಗಿದೆ. ಕರಾರುಗಳಲ್ಲಿಯ ನಿಬಂಧನೆಗಳು ಕಠಿಣವಾಗಿರುವ ಅಗತ್ಯವಿದೆ. ಕೆಲವರಿಗೆ ಓರ್ವ ನಟಿಯೊಂದಿಗೆ ಕೆಲಸ ಮಾಡುವುದು ಇಷ್ಟವಿಲ್ಲವಾದರೆ ಅವರು ಹೊರಗೆ ಹೋಗಬೇಕು. ಅವರೇಕೆ ನಟಿಯ ವೃತ್ತಿಜೀವನವನ್ನು ಹಾಳು ಮಾಡಬೇಕು ಎಂದು ಪ್ರಶ್ನಿಸಿದರು.

ಹಿಂದೆ ನಟಿಯರಿಗೆ ತಮಗಾಗುತ್ತಿರುವ ಕಿರುಕುಳಗಳ ವಿರುದ್ಧ ದೂರಿಕೊಳ್ಳಲು ಅವಕಾಶಗಳಿರಲಿಲ್ಲ. ಆದರೆ ಇಂದು ಅವರಿಗೆ ಎಲ್ಲರಿಂದಲೂ ಬೆಂಬಲ ದೊರೆಯುತ್ತಿದೆ. ಇದು ಒಳ್ಳೆಯದು. ಮೀ ಟೂ ಅಭಿಯಾನವು ಇಲ್ಲಿ ಉಳಿಯಲಿದೆ ಮತ್ತು ಅದು ಕೆಲಸದ ಸ್ಥಳಗಳಲ್ಲಿ ವಾತಾವರಣದಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಟಂಡನ್ ತೃಪ್ತಿ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News