ಮಾನಸಿಕ ಆರೋಗ್ಯ ಪ್ರಾಧಿಕಾರಗಳು, ಪುನರ್‌ಪರಿಶೀಲನಾ ಮಂಡಳಿಗಳ ರಚನೆಗೆ ರಾಜ್ಯಗಳಿಗೆ ಕೇಂದ್ರದ ಸೂಚನೆ

Update: 2018-10-21 16:33 GMT

ಹೊಸದಿಲ್ಲಿ,ಅ.21: ಮಾನಸಿಕ ಆರೋಗ್ಯ ಕಾಯ್ದೆ,2017ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಗಳು ಮತ್ತು ಮಾನಸಿಕ ಆರೋಗ್ಯ ಪುನರ್‌ಪರಿಶೀಲನಾ ಮಂಡಳಿಗಳನ್ನು ಸ್ಥಾಪಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

 ರಾಜ್ಯ ಸರಕಾರದ ಅಧಿಕಾರಿಗಳು ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಇತರ ಸದಸ್ಯರನ್ನೊಳಗೊಂಡ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಗಳು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ವಹಿಸಲಿವೆ. ಜಿಲ್ಲಾ ಮಾನಸಿಕ ಆರೋಗ್ಯ ಪುನರ್‌ಪರಿಶೀಲನಾ ಮಂಡಳಿಗಳು ಕಾಯ್ದೆಯ ನಿಯಮಾವಳಿಗಳ ಉಲ್ಲಂಘನೆಗೆ ಸಂಬಂಧಿಸಿದ ಸಾರ್ವಜನಿಕ ದೂರುಗಳನ್ನು ನಿರ್ವಹಿಸಲಿವೆ ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿ(ಆರೋಗ್ಯ)ಗಳಿಗೆ ಬರೆದಿರುವ ಪತ್ರದಲ್ಲಿ ಸಚಿವಾಲಯವು ತಿಳಿಸಿದೆ.

ಮಾನಸಿಕ ಆರೋಗ್ಯ ಕಾಯ್ದೆ,2017ರಂತೆ ಮಾನಸಿಕ ಅಸ್ವಾಸ್ಥವನ್ನು ಹೊಂದಿರುವ ಪ್ರತಿಯೋರ್ವ ವ್ಯಕ್ತಿಗಳನ್ನು ಎಲ್ಲ ಆರೋಗ್ಯ ಸೇವೆಗಳ ಒದಗಣೆಯಲ್ಲಿ ದೈಹಿಕ ಅನಾರೋಗ್ಯ ಹೊಂದಿರುವ ವ್ಯಕ್ತಿಗಳಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ.

ಅಲ್ಲದೆ ಮಾನಸಿಕ ಅಸ್ವಸ್ಥರ ಆತ್ಮಹತ್ಯೆ ಯತ್ನವು ಕಾನೂನಿನಡಿ ದಂಡನೀಯವಾಗಿರುವುದಿಲ್ಲ. ಮಾನಸಿಕ ಅಸ್ವಸ್ಥರಿಗೆ ಮಸಲ್ ರಿಲ್ಯಾಕ್ಸಂಟ್ ಮತ್ತು ಅರಿವಳಿಕೆ ನೀಡದೇ ವಿದ್ಯುದಾಘಾತ ಚಿಕಿತ್ಸೆ ನೀಡುವುದನ್ನೂ ಕಾಯ್ದೆಯು ನಿಷೇಧಿಸಿದೆ. ಯಾವುದೇ ವಿಧದಲ್ಲಿಯೂ ಇಂತಹ ರೋಗಿಗಳನ್ನು ಸಂಕೋಲೆಗಳಿಂದ ಕಟ್ಟಿಹಾಕುವಂತಿಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News