ಜಮ್ಮು ಕಾಶ್ಮೀರ: ಒಳನುಸುಳುವಿಕೆಗೆ ತಡೆ; ಮೂವರು ಯೋಧರು ಹುತಾತ್ಮ, ಇಬ್ಬರು ಉಗ್ರರು ಬಲಿ

Update: 2018-10-21 16:56 GMT

 ಜಮ್ಮು, ಅ. 21: ಜಮ್ಮು ಹಾಗೂ ಕಾಶ್ಮೀರದ ರಾಜೋರಿ ಜಿಲ್ಲೆಯಲ್ಲಿ ನಿಯಂತ್ರಣ ಗಡಿರೇಖೆಯಲ್ಲಿ ಒಳನುಸುಳಲು ಪ್ರಯತ್ನಿಸುವುದನ್ನು ರವಿವಾರ ಸೇನೆ ವಿಫಲಗೊಳಿಸಿದ ಬಳಿಕ ನಡೆದ ಎನ್‌ಕೌಂಟರ್‌ನಲ್ಲಿ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಪಾಕಿಸ್ತಾನಿ ನುಸುಳುಕೋರರು ಹತರಾಗಿದ್ದಾರೆ. ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಒಳನುಸುಳುಕೋರರು ಪಾಕಿಸ್ತಾನ ಸೇನಾ ಪಡೆಯ ಯೋಧರು ಹಾಗೂ ತರಬೇತು ಪಡೆದ ಉಗ್ರರನ್ನು ಹೊಂದಿರುವ ಗಡಿ ಕಾರ್ಯಾಚರಣೆ ತಂಡ (ಬಿಎಟಿ)ದ ಸದಸ್ಯರು ಎಂದು ಶಂಕಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸೇನಾ ಅಧಿಕಾರಿಯೊೂಬ್ಬರು ತಿಳಿಸಿದ್ದಾರೆ.

 ಗಡಿ ನಿಯಂತ್ರಣ ರೇಖೆಯ ಸಮೀಪ ಒಳನುಸುಳುತ್ತಿದ್ದ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಪಾಕಿಸ್ತಾನಿ ನುಸುಳುಕೋರರ ಮೇಲೆ ಭಾರತೀಯ ಸೇನೆ ಸುಮಾರು ಅಪರಾಹ್ನ 1.45ರ ಹೊತ್ತಿಗೆ ಎನ್‌ಕೌಂಟರ್ ನಡೆಸಿತು. ಸೇನೆ ಇಬ್ಬರು ಒಳನುಸುಳುಕೋರರನ್ನು ಹತ್ಯೆಗೈದಿತು. ಅವರಿಂದ ಎ.ಕೆ. 47 ಸಹಿತ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು ಎಂದು ವಕ್ತಾರರು ತಿಳಿಸಿದ್ದಾರೆ.

ಒಳನುಸುಳುಕೋರರೊಂದಿಗಿನ ಹೋರಾಟದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ವಿಮಾನದ ಮೂಲಕ ಉಧಮ್‌ಪುರದಲ್ಲಿರುವ ಆರ್ಮಿ ಕಮಾಂಡ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡ ಯೋಧರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.

ಎನ್‌ಕೌಂಟರ್ ನಡೆದ ಪ್ರದೇಶವನ್ನು ಸುತ್ತುವರಿಯಲಾಗಿದೆ. ‘ಶೋಧ ಹಾಗೂ ನಾಶ’ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News