ಉಡುಪಿ: ಮರಳು ಸಮಸ್ಯೆ ವಿರುದ್ಧದ ಧರಣಿಯಲ್ಲಿ ಪದಾಧಿಕಾರಿಗಳ ಮಧ್ಯೆಯೇ ಹೊಯ್‌ಕೈ

Update: 2018-10-22 12:44 GMT

ಉಡುಪಿ, ಅ.22: ಮರಳುಗಾರಿಕೆ ಶೀಘ್ರದಲ್ಲೇ ಆರಂಭಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಧರಣಿಯ ವೇಳೆ ಸಂಘದ ಪದಾಧಿಕಾರಿಗಳ ಮಧ್ಯೆ ಹೊಯ್‌ಕೈ ಹಾಗೂ ಹಲ್ಲೆ ಯತ್ನ ನಡೆದಿರುವುದು ವರದಿಯಾಗಿದೆ.

ನೂರಾರು ಸಂಖ್ಯೆಯ ಮಾಲಕರು, ಚಾಲಕರು ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಧರಣಿ ನಡೆಸುತ್ತಿದ್ದ ಸಂದರ್ಭ ಲಾರಿ ಮಾಲಕರ ಸಂಘದ ಮುಖಂಡ ಹಾಗೂ ಮರಳು ಪರವಾನಿಗೆದಾರರ ಸಂಘದ ಪದಾಧಿಕಾರಿಯೂ ಆಗಿರುವ ಉದಯ ಕುಮಾರ್ ಜಿಲ್ಲಾಧಿಕಾರಿ ಕಚೇರಿಯೊಳಗೆ ತೆರಳಿ ಮರಳು ದಿಬ್ಬಗಳ ಪರವಾನಿಗೆಯನ್ನು ವಿಚಾರಿಸಿದರೆನ್ನಲಾಗಿದೆ. ಇದರಿಂದ ಇತರ ಪದಾಧಿಕಾರಿಗಳು ಉದಯ ಕುಮಾರ್ ವಿರುದ್ಧ ಆಕ್ರೋಶ ಗೊಂಡಿದ್ದರು.

ಕಚೇರಿಯಿಂದ ಹೊರಬರುತ್ತಿದ್ದಂತೆ ಧರಣಿ ನಿರತರು ಉದಯ ಕುಮಾರ್‌ನನ್ನು ಪ್ರಶ್ನಿಸಿದರು. ನಾವಿಲ್ಲಿ ಬೆಳಗ್ಗೆಯಿಂದ ಧರಣಿ ನಡೆಸುತ್ತಿದ್ದರೆ ನೀವು ಮರಳು ಪರವಾನಿಗೆಯ ಲಾಬಿ ನಡೆಸುತ್ತಿದ್ದೀರಿ ಎಂದು ಆರೋಪಿಸಿದರು. ನಾನು ಗಣಿ ಇಲಾಖೆ ನೋಟಿಸ್ ಬೋರ್ಡ್‌ನಲ್ಲಿ ಹಾಕಿರುವ ಅರ್ಹ ಪರವಾನಿಗೆದಾರರ ಪಟ್ಟಿಯನ್ನು ನೋಡಲು ಹೋಗಿರುವುದಾಗಿ ಉದಯ ಕುಮಾರ್ ಹೇಳಿದರೂ ಕೇಳದ ಧರಣಿ ನಿರತರು ಅವರ ವಿರುದ್ಧ ಮುಗಿಬಿದ್ದರು.

ಕುಪಿತಗೊಂಡ ಲಾರಿ ಮಾಲಕರ ಸಂಘದ ಪ್ರವೀಣ್ ಸುವರ್ಣ, ಉದಯ ಕುಮಾರ್ ಅವರನ್ನು ತಳ್ಳಿ ಹಾಕಿ ಹಲ್ಲೆಗೆ ಮುಂದಾದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಉದಯ ಕುಮಾರ್ ಅವರನ್ನು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಕರೆದುಕೊಂಡು ಹೋದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News