​ಮಂಗಳೂರು : ಬೀಡಿ, ಸಿಗರೇಟು ಮಾರಾಟಗಾರರ ಸಂಘದಿಂದ ಬೃಹತ್ ಪ್ರತಿಭಟನೆ

Update: 2018-10-22 12:22 GMT

ಮಂಗಳೂರು, ಅ.22: ಕೇಂದ್ರ, ರಾಜ್ಯ ಸರಕಾರಗಳು ಧೂಮಪಾನ ನಿಷೇಧ ಕಾನೂನು ಜಾರಿಗೊಳಿಸುವತ್ತ ದಾಪುಗಾಲು ಇಡುತ್ತಿವೆ. ಇದರಿಂದಾಗಿ ಲಕ್ಷಾಂತರ ದುಡಿಯುವ ವರ್ಗದ ಬದುಕಿನ ಮೇಲೆ ಗದಾಪ್ರಹಾರ ನಡೆಸಿದಂತಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದ.ಕ. ಜಿಲ್ಲಾ ಚಿಲ್ಲರೆ ಬೀಡಿ, ಸಿಗರೇಟು ಮಾರಾಟಗಾರರ ಸಂಘದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮತ್ತೊಂದು ಕಡೆಯಲ್ಲಿ ಸರಕಾರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ರತ್ನಗಂಬಳಿ ಹಾಸಿ ಭವ್ಯ ಸ್ವಾಗತ ಕೋರುತ್ತಿದೆ. ಈ ಮೂಲಕ ಎರಡೂ ಸರಕಾರಗಳು ಉಳ್ಳವರ ಪರವಾಗಿದೆ ಎಂದು ಸಾಬೀತು ಪಡಿಸಿದೆ ಎಂದು ಹೇಳಿದರು.

ಚಿಲ್ಲರೆ ಬೀಡಿ ಸಿಗರೇಟ್-ತಂಬಾಕು ಪದಾರ್ಥಗಳ ಮಾರಾಟಕ್ಕೆ ಪ್ರತ್ಯೇಕ ಲೈಸೆನ್ಸ್ ಪಡೆಯಬೇಕೆಂಬ ರಾಜ್ಯ ಸರಕಾರದ ಅವೈಜ್ಞಾನಿಕ ತೀರ್ಮಾನ ಖಂಡನೀಯ. ಬೀಡಿ ಕಾರ್ಮಿಕರ ವಿರುದ್ಧ ವಿನಾಕಾರಣ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರ ಬದುಕನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನಾ ಪ್ರದರ್ಶನದಲ್ಲಿ ಮಾತನಾಡಿದ ದ.ಕ. ಜಿಲ್ಲಾ ಚಿಲ್ಲರೆ ಬೀಡಿ, ಸಿಗರೇಟು ಮಾರಾಟಗಾರರ ಸಂಘದ ಅಧ್ಯಕ್ಷ ಸುನೀಲ್‌ಕುಮಾರ್ ಬಜಾಲ್, ದ.ಕ. ಜಿಲ್ಲೆಯಾದ್ಯಂತ 5,000 ಕ್ಕೂ ಮಿಕ್ಕಿದ ಗೂಡಂಗಡಿದಾರರು ಚಿಲ್ಲರೆ ಬೀಡಿ, ಸಿಗರೇಟ್ ಮಾರಾಟ ಮಾಡುವ ಮೂಲಕ ತಮ್ಮ ಬದುಕನ್ನು ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಆದರೆ ರಾಜ್ಯ ಸರಕಾರವು ಯಾವುದೇ ರೀತಿಯ ಕಾರಣಗಳನ್ನು ನೀಡದೆ ಗೂಡಂಗಡಿಗಳಲ್ಲಿ ಚಿಲ್ಲರೆಯಾಗಿ ಬೀಡಿ, ಸಿಗರೇಟ್‌ಗಳನ್ನು ಮಾರಾಟ ಮಾಡಬಾರದೆಂದು ಕಟ್ಟಪ್ಪಣೆ ಹೊರಡಿಸಿದೆ.ಇದನ್ನೇ ನೆಪ ಮಾಡಿ ಪೋಲಿಸರು ವಿನಾಕಾರಣ ಕಿರುಕುಳವನ್ನು ನೀಡಿ ವಿಪರೀತ ದಂಡವನ್ನು ವಸೂಲಿ ಮಾಡುತ್ತಿರುವುದು ಮಾತ್ರವಲ್ಲದೆ, ದೈಹಿಕ ಹಲ್ಲೆಯನ್ನು ಕೂಡ ನಡೆಸಿದ್ದಾರೆ ಎಂದು ಆರೋಪಿಸಿದರು.

ಪ್ರಸ್ತುತ ರಾಜ್ಯ ಸರಕಾರವು ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಕ್ಕೆ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕ ಲೈಸನ್ಸ್ ಹೊಂದಿರಬೇಕೆಂಬ ಆದೇಶವನ್ನು ನೀಡಿದ್ದು ಇದು ತೀರಾ ಅವೈಜ್ಞಾನಿಕವಾಗಿದೆ. ಈಗಾಗಲೇ ಗೂಡಂಗಡಿದಾರರು ಸ್ಥಳೀಯ ಸಂಸ್ಥೆಯಿಂದ ಲೈಸನ್ಸ್ ಹೊಂದಿದ್ದಾರೆ. ಈಗ ಮತ್ತೆ ಪ್ರತ್ಯೇಕವಾಗಿ ಲೈಸನ್ಸ್ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಿಗರೇಟ್ ಕಂಪೆನಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗದ ರಾಜ್ಯ ಸರಕಾರವು ಬಡಪಾಯಿ ಗೂಡಾಂಗಡಿದಾರರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತನ್ನ ಪೌರುಷವನ್ನು ತೋರಿಸುತ್ತಿದೆ ಎಂದು ಟೀಕಿಸಿದರು.

300ಕ್ಕೂ ಮಿಕ್ಕಿದ ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರು ನಗರದ ಮಿನಿ ವಿಧಾನಸೌಧದಿಂದ ಮೆರವಣಿಗೆಯಲ್ಲಿ ಹೊರಟು, ‘ಬೀಡಿ ಸಿಗರೇಟ್ ಮಾರಾಟಕ್ಕೆ ಪ್ರತ್ಯೇಕ ಲೈಸನ್ಸ್ ಬೇಡವೇ ಬೇಡ’, ‘ದ್ವಂದ್ವ ನೀತಿಯನ್ನು ಪ್ರತಿಪಾದಿಸುವ ರಾಜ್ಯ ಸರಕಾರಕ್ಕೆ ಧಿಕ್ಕಾರ’, ‘ಬಡಪಾಯಿ ಗೂಡಂಗಡಿದಾರರ ಬದುಕನ್ನು ರಕ್ಷಿಸಿರಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು, ಮತ್ತಿತರರು ಉಪಸ್ಥಿತರಿದ್ದರು. ಹೋರಾಟದ ನೇತೃತ್ವವನ್ನು ಸಂಘದ ನಾಯಕರಾದ ಅಬೂಬಕ್ಕರ್ ಕುದ್ರೋಳಿ, ಗಣೇಶ್ ಕಾಪಿಕಾಡ್, ಅಬ್ದುಲ್ ರೆಹಮಾನ್, ರಾಮಚಂದ್ರ ಸಾಲಿಯಾನ್, ರಾಧೇಶ್ಯಾಮ್, ರಾಜೇಶ್, ಮೋಹನ್ ದಾಸ್ ಆಳ್ವಾ, ಹರೀಶ್ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News