ವಿದ್ಯುತ್ ಲೈನ್ ಕಾಮಗಾರಿ ವಿಚಾರ: ರೈತಸಂಘದ ಕಚೇರಿಯಲ್ಲಿ ಕೆಪಿಟಿಸಿಎಲ್, ಮೆಸ್ಕಾಂ ಅಧಿಕಾರಿಗಳಿಂದ ಸಭೆ

Update: 2018-10-22 12:56 GMT

ಪುತ್ತೂರು,ಅ.22: ತಾಲೂಕಿನ ಮಾಡಾವು ಎಂಬಲ್ಲಿಂದ ಆಲಂಕಾರ್ ತನಕ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಲು ಉದ್ದೇಶಿಸಲಾದ ವಿದ್ಯುತ್ ಲೈನ್ ಕಾಮಗಾರಿಯ ವಿಚಾರಕ್ಕೆ ಸಂಬಂಧಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಮಿತಿಯ ನೇತೃತ್ವಲದಲ್ಲಿ ಸಂಭಾವಿತ ಸಂತ್ರಸ್ತರ, ರೈತ ಮುಖಂಡರ ಹಾಗೂ ಆಧಿಕಾರಿಗಳ ಸಭೆಯು ಸೋಮವಾರ ಪುತ್ತೂರಿನಲ್ಲಿರುವ ಜಿಲ್ಲಾ ರೈತ ಸಂಘ ಹಸಿರು ಸೇನೆಯ ಕಚೇರಿಯಲ್ಲಿ ನಡೆಯಿತು. 

ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ರೈತರ ಸಭೆಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಪಾಲ್ಗೊಂಡು ಈ ಪ್ರದೇಶದ ಸಂಭಾವ್ಯ ಸಂತ್ರಸ್ತರ ಅಹವಾಲು ಆಲಿಸಿದರು. ಮಾಡಾವಿನಿಂದ ಪುಂಚಪ್ಪಾಡಿ ಮೂಲಕ ಸವಣೂರು, ಕುದ್ಮಾರು, ಬೆಳಂದೂರು ಮಾರ್ಗವಾಗಿ ಆಲಂಕಾರಿಗೆ ವಿದ್ಯುತ್ ಲೈನ್ ನಿರ್ಮಿಸಲು ಉದ್ದೇಶಿಸಿರುವ ಸಂಗತಿಯನ್ನು ಸಭೆಯಲ್ಲಿ ತಿಳಿಸಲಾಯಿತು. ಸಮಗ್ರ ಸರ್ವೆ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಇದಾದ ಬಳಿಕ ಡಿಪಿಆರ್, ಅಂದಾಜು ಪಟ್ಟಿ ನಿರ್ಧಾರವಾಗಲಿದ್ದು, ಮಂಜೂರಾತಿ, ಟೆಂಡರ್, ಕಾರ್ಯಾದೇಶ, ಅನುಷ್ಠಾನ ಇತ್ಯಾದಿ ಚಟುವಟಿಕೆಗಳು ನಡೆಯಲಿವೆ. ರೈತರು ಸಹಕಾರ ನೀಡಬೇಕಿದೆ ಎಂದು ಅಧಿಕಾರಿಗಳು ಹೇಳಿದರು. 

ನೆಟ್ಲಮುಡ್ನೂರು- ಮಾಡಾವು ಲೈನ್ ನಿರ್ಮಾಣದ ಹಾದಿಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬಂದಿವೆ. ಪರಿಹಾರದಲ್ಲಿ ವಿಳಂಬ, ಸಂತ್ರಸ್ತರಿಂದ ನ್ಯಾಯಾಂಗ ಹೋರಾಟ ಇತ್ಯಾದಿ ನಡೆದ ಕಾರಣ ಲೈನ್ ನಿರ್ಮಾಣ ಯೋಜನೆ ಹತ್ತು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಈ ಗೊಂದಲ ಆಗದೇ ಇರಬೇಕಾದರೆ ಕಾಮಗಾರಿ ಆರಂಭಕ್ಕೆ ಮೊದಲೇ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯಬೇಕು. ಸೂಕ್ತ ಪರಿಹಾರ ನಿಗದಿ ಮಾಡಿ, ಅದನ್ನು ಮೊದಲೇ ಪಾವತಿ ಮಾಡಬೇಕು ಎಂದು ಸಭೆಯಲ್ಲಿ ರೈತ ಸಂಘದ ಸದಸ್ಯರು ಮತ್ತು ಸಂಭಾವ್ಯ ಸಂತ್ರಸ್ತರು ಹೇಳಿದರು.

ಲೈನ್ ಹೋಗುವ ಹಾದಿಯಲ್ಲಿ ಲೈನ್‍ನ ಎರಡೂ ಬದಿಗೆ ತಲಾ 11 ಮೀಟರ್‍ನಂತೆ 22 ಮೀಟರ್ ಜಾಗವನ್ನು ಪರಿಗಣಿಸಲಾಗುತ್ತದೆ. ಮೇಲ್ಭಾಗದಿಂದ ಲೈನ್ ಹೋದರೂ ಅದರ ಕೆಳಭಾಗದ 22 ಮೀಟರ್ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡಲಾಗದು. ಕೃಷಿಯೂ ಕಷ್ಟ. ಹೀಗಾಗಿ ಈ ಜಾಗಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸರ್ವೆ ಮಾಡಲು ರೈತರು ಅಡ್ಡಿ ಮಾಡುವುದಿಲ್ಲ. ಆದರೆ ವೈಜ್ಞಾನಿಕ ಪರಿಹಾರ ನಿಗದಿ ಮಾಡಬೇಕು. ಅದರ ಬಗ್ಗೆ ಇಲಾಖೆ ಮುಂಚಿತವಾಗಿ ಪಾರದರ್ಶಕ ರೀತಿಯಲ್ಲಿ ಮಾಹಿತಿ ನೀಡಬೇಕು. ಯಾವುದೇ ಗುಪ್ತ ವ್ಯವಹಾರ ಇರಬಾರದು. ಮಾಹಿತಿಗಳನ್ನು ಮುಚ್ಚಿಡಬಾರದು. ಪರಿಹಾರ ಹಣ ನೀಡಿದ ಮೇಲೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಲಾಯಿತು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ಮುಖಂಡರಾದ ಸುಧಾಕರ ರೈ,  ಇಸುಬು ಹಿರೇಬಂಡಾಡಿ, ದಾಮೋದರ ಬರೆಪ್ಪಾಡಿ, ರತನ್ ಬರೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್ ಗಂಗಾಧರ ಕೆ., ಮೆಸ್ಕಾಂ ಪುತ್ತೂರು ಕಾರ್ಯ ನಿರ್ವಾಹಕ ಎಂಜಿನಿಯರ್  ನರಸಿಂಹ, ಕೆಪಿಟಿಸಿಎಲ್‍ನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಬಸವರಾಜ್ ಎಚ್., ಜೆಇಗಳಾದ ನಾಗರಾಜ್, ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News