×
Ad

ಅಂತರ್‌ರಾಷ್ಟ್ರೀಯ ಕ್ರಿಕೆಟ್ ಗೆ ರಂಗನ ಹೆರಾತ್ ವಿದಾಯ

Update: 2018-10-22 23:59 IST

ಕೊಲಂಬೊ, ಅ.22: ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಶ್ರೀಲಂಕಾದ ರಂಗನ ಹೆರಾತ್ ಮುಂದಿನ ತಿಂಗಳು ಗಾಲೆಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ.

ಹೆರಾತ್ ವಿದಾಯದ ವಿಚಾರವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ.

40ರ ಹರೆಯದ ಹೆರಾತ್ ಕಳೆದ ಕೆಲವು ವರ್ಷಗಳಿಂದ ಮಂಡಿನೋವು ಸಮಸ್ಯೆ ಎದುರಿಸುತ್ತಿದ್ದು, 19 ವರ್ಷಗಳ ಹಿಂದೆ ಕ್ರಿಕೆಟ್‌ಗೆ ಕಾಲಿಟ್ಟ ಮೈದಾನದಲ್ಲೇ ಕೊನೆಯ ಪಂದ್ಯ ಆಡಲಿದ್ದಾರೆ.

‘‘ಗಾಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಕೊನೆಗೊಂಡ ಬಳಿಕ ರಂಗನ ಹೆರಾತ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ’’ ಎಂದು ಶ್ರೀಲಂಕಾ ಕ್ರಿಕೆಟ್ ಟೆಸ್ಟ್ ಮೆಸೇಜ್‌ನಲ್ಲಿ ತಿಳಿಸಿದೆ.

 ಜುಲೈನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸ್ವದೇಶದಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಮೊದಲೇ, ತಾನು ನವೆಂಬರ್‌ನಲ್ಲಿ ಸಮಕಾಲೀನ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತೇನೆಂದು ಘೋಷಿಸಿದ್ದರು. ಹೆರಾತ್ 2016ರಲ್ಲಿ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

‘‘ಈ ವರ್ಷಾಂತ್ಯದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧ ಸರಣಿಯೇ ನನ್ನ ಕೊನೆಯ ಸರಣಿಯಾಗುವ ಸಾಧ್ಯತೆಯಿದೆ. ಪ್ರತಿ ಕ್ರಿಕೆಟಿಗನಿಗೆ ನಿವೃತ್ತಿಯ ಸಮಯ ಬರುತ್ತದೆ. ನನಗೂ ಕೂಡ ಈಗ ಸಮಯ ಕೂಡಿ ಬಂದಿದೆ’’ ಎಂದು ಬಿಬಿಸಿಗೆ ಹೆರಾತ್ ತಿಳಿಸಿದ್ದಾರೆ.

ಹೆರಾತ್ 92 ಟೆಸ್ಟ್ ಪಂದ್ಯಗಳಲ್ಲಿ 430 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಹೆರಾತ್ 34 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದು, 9 ಬಾರಿ 10 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.

2010ರಲ್ಲಿ ನಿವೃತ್ತಿಯಾದ ಮುತ್ತಯ್ಯ ಮುರಳೀಧರನ್(800 ವಿಕೆಟ್)ಯಶಸ್ಸಿನ ಉತ್ತುಂಗದಲ್ಲಿದ್ದಾಗ ಹೆರಾತ್ ಹೆಚ್ಚು ಪ್ರಸಿದ್ಧಿಯಲ್ಲಿರಲಿಲ್ಲ. ಹೆರಾತ್‌ಗೆ ಮೊದಲ 14 ಪಂದ್ಯಗಳಲ್ಲಿ 36 ವಿಕೆಟ್ ಪಡೆಯಲು ಸಾಧ್ಯವಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಾನ ಪಡೆಯಲು ಪರದಾಟ ನಡೆಸಿದ್ದರು. 31ನೇ ವಯಸ್ಸಿನ ಬಳಿಕ ಶ್ರೀಲಂಕಾದ ಪಂದ್ಯ ಗೆದ್ದುಕೊಡಬಲ್ಲ ಸ್ಪಿನ್ನರ್ ಆಗಿ ಮಿಂಚತೊಡಗಿದರು.

 ಮುರಳೀಧರನ್ ನಿವೃತ್ತಿಯ ಬಳಿಕ ಹೆರಾತ್‌ಲಂಕಾದ ಸ್ಪಿನ್ ದಾಳಿಯ ನೇತೃತ್ವವಹಿಸಿಕೊಂಡಿದ್ದರು. ಆದರೆ,ಕಳೆದ ಕೆಲವು ವರ್ಷಗಳಿಂದ ಅವರಿಗೆ ಮಂಡಿನೋವು ಬಾಧಿಸತೊಡಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News