ಆರೆಸ್ಸೆಸ್ ಶಬರಿಮಲೆಯನ್ನು ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್

Update: 2018-10-23 14:24 GMT

ತಿರುವನಂತಪುರ,ಅ.23: ತೀರ್ಥಕ್ಷೇತ್ರ ಶಬರಿಮಲೆಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳ ಕುರಿತು ಸಂಘ ಪರಿವಾರ ಮತ್ತು ಆರೆಸ್ಸೆಸ್ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಿಡಿಕಾರಿದ್ದಾರೆ. ಸಂಘ ಪರಿವಾರವು ಕಳೆದ ವಾರ ಶಬರಿಮಲೆ ಕ್ಷೇತ್ರದಲ್ಲಿ ಹಿಂಸಾಚಾರಗಳನ್ನು ಉತ್ತೇಜಿಸಿತ್ತು ಮತ್ತು ಆರೆಸ್ಸೆಸ್ ಕ್ಷೇತ್ರವನ್ನು ರಣರಂಗವನ್ನಾಗಿಸಿತ್ತು ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಎಲ್ಲ ವಯೋಮಾನಗಳ ಮಹಿಳೆಯರಿಗೆ ಶಬರಿಮಲೆ ಪ್ರವೇಶಾವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಕಳೆದ ವಾರ ಮೊದಲ ಬಾರಿಗೆ ದೇವಸ್ಥಾನದ ದ್ವಾರಗಳನ್ನು ತೆರೆಯಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಪ್ರತಿಭಟನಾಕಾರರು ದೇವಸ್ಥಾನವನ್ನು ಪ್ರವೇಶಿಸಲು ಸುಮಾರು ಒಂದು ಡಝನ್ ಮಹಿಳೆಯರು ನಡೆಸಿದ್ದ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು. ಐದು ದಿನಗಳ ಮಾಸಿಕ ಪೂಜಾ ವಿಧಿಗಳ ಬಳಿಕ ಸೋಮವಾರ ರಾತ್ರಿ ದೇವಸ್ಥಾನವನ್ನು ಮುಚ್ಚಲಾಗಿದೆ.ಪ್ರತಿಭಟನಾಕಾರರು ರಾಜ್ಯದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಲು ಯೋಜಿತ ಮತ್ತು ಉದ್ದೇಶಪೂರ್ವಕ ಪ್ರಯತ್ನಗಳನ್ನು ನಡೆಸಿದ್ದರು. ಶಬರಿಮಲೆಗೆ ಆಗಮಿಸಿದ್ದ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಲಾಗಿದೆ,ಅವರಿಗೆ ಮಾನಸಿಕ ಕಿರುಕುಳಗಳನ್ನು ನೀಡಲಾಗಿದೆ ಎಂದು ವಿಜಯನ್ ಹೇಳಿದರು.

ಅಯ್ಯಪ್ಪ ಭಕ್ತರು ಮಹಿಳೆಯರ ವಿರುದ್ಧವಾಗಿಲ್ಲ ಎಂದು ಸಂಘ ಪರಿವಾರವು ಹೇಳುತ್ತಿದೆ. ಇದು ನಿಜವಾಗಿದ್ದರೆ ಮಹಿಳೆಯರು ಇನ್ನೂ ದೇವಸ್ಥಾನದ ಬಳಿ ಸಾಲಿನಲ್ಲಿ ನಿಂತಿದ್ದಾಗಲೇ ಅವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿಗಳು ನಡೆದಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು,ದೇವಸ್ಥಾನದ ಆರಂಭೋತ್ಸವವನ್ನು ವರದಿ ಮಾಡಲು ಬಂದಿದ್ದ ಪತ್ರಕರ್ತರ ಮೇಲೆ ನಡೆದ ದಾಳಿಗಳು ಖಂಡನಾರ್ಹ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೆ ಅವರು,ಸಂಪ್ರದಾಯಗಳಲ್ಲಿ ನಂಬಿಕೆಯುಳ್ಳ ಸಿಬ್ಬಂದಿಗಳು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಕರೆ ನೀಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದರು ಎಂದ ಅವರು,ಪೊಲೀಸರನ್ನು ಕೋಮುಬಣ್ಣದೊಂದಿಗೆ ಚಿತ್ರಿಸಲು ಸಂಘ ಪರಿವಾರವು ಪ್ರಯತ್ನಿಸಿತ್ತು ಎಂದು ಆರೋಪಿಸಿದರು.ಶಬರಿಮಲೆ ಕ್ಷೇತ್ರವನ್ನು ಶಾಂತಿಯುತ ವಲಯವನ್ನಾಗಿ ಮಾಡಲು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ತನ್ನ ಸರಕಾರವು ಬದ್ಧವಾಗಿದೆ ಎಂದು ವಿಜಯನ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News