ಖಶೋಗಿ ಹತ್ಯೆ ಪೂರ್ವಯೋಜಿತ: ಟರ್ಕಿ ಅಧ್ಯಕ್ಷ ಎರ್ದೊಗಾನ್

Update: 2018-10-23 15:52 GMT

ಅಂಕಾರ (ಟರ್ಕಿ), ಅ. 23: “ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪೂರ್ವಯೋಜಿತವಾಗಿತ್ತು ಎನ್ನುವುದಕ್ಕೆ ಬಲವಾದ ಸೂಚನೆಗಳಿವೆ ಹಾಗೂ ಹತ್ಯೆಯ ಹೊಣೆಯನ್ನು ಗುಪ್ತಚರ ಏಜಂಟ್‌ಗಳ ಮೇಲೆ ಹೊರಿಸುವುದರಿಂದ ನಮಗೆ ಸಮಾಧಾನವಾಗುವುದಿಲ್ಲ” ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

ಮಂಗಳವಾರ ಟರ್ಕಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಲಿಲ್ಲ.

ಜಮಾಲ್ ಹತ್ಯೆಗೆ ಸ್ವತಃ ಯುವರಾಜ ಆದೇಶ ನೀಡಿದ್ದಾರೆ ಎಂಬುದಾಗಿ ಅಮೆರಿಕದ ಕೆಲವು ಸಂಸದರು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಆದರೆ, ಹತ್ಯೆಗೆ ಯಾರು ಆದೇಶ ನೀಡಿದ್ದಾರೆ ಎನ್ನುವುದು ಸೇರಿದಂತೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ಹತ್ಯೆಯ ಬಗ್ಗೆ ಟರ್ಕಿ ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳುವುದಿಲ್ಲ ಎಂದು ಅವರು ಎರ್ದೊಗಾನ್ ಘೋಷಿಸಿದರು.

ಖಶೋಗಿಯನ್ನು ‘ಅತ್ಯಂತ ಅಮಾನುಷವಾಗಿ’ ಕೊಲ್ಲಲಾಯಿತು ಎಂದು ಅವರು ಆರೋಪಿಸಿದರು.

ತನ್ನ ಟರ್ಕಿಯ ಗೆಳತಿಯನ್ನು ಮದುವೆಯಾಗುವುದಕ್ಕಾಗಿ ಅಗತ್ಯ ದಾಖಲೆಪತ್ರಗಳನ್ನು ಪಡೆಯಲು ಅಕ್ಟೋಬರ್ 2ರಂದು ಟರ್ಕಿಯ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಹೋಗಿದ್ದ ಖಶೋಗಿ ವಾಪಸ್ ಬಂದಿರಲಿಲ್ಲ.

ಆರಂಭದಲ್ಲಿ, ಕಚೇರಿ ಪ್ರವೇಶಿಸಿದ ಸ್ವಲ್ಪ ಹೊತ್ತಿನ ಬಳಿಕ ಖಶೋಗಿ ಹೊರಗೆ ಹೋಗಿದ್ದಾರೆ ಎಂದು ಹೇಳುತ್ತಾ ಬಂದಿದ್ದ ಸೌದಿ ಅರೇಬಿಯ, ಎರಡು ವಾರಗಳ ಬಳಿಕ, ಕಚೇರಿಯಲ್ಲಿ ನಡೆದ ಮುಷ್ಟಿ ಕಾಳಗದಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ವಿವರಣೆಯನ್ನು ನೀಡಿತು ಹಾಗೂ ಬಳಿಕ ಪದೇ ಪದೇ ತನ್ನ ವಿವರಣೆಯನ್ನು ಬದಲಿಸಿತು.

ಸೌದಿ ಆರೋಪಿಗಳ ವಿಚಾರಣೆ ಇಸ್ತಾಂಬುಲ್‌ನಲ್ಲಿ ನಡೆಯಲಿ

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಲ್ಲಿ ಶಾಮೀಲಾಗಿರುವ ಸೌದಿ ಆರೋಪಿಗಳ ವಿಚಾರಣೆ ಇಸ್ತಾಂಬುಲ್‌ನಲ್ಲಿ ನಡೆಯಲಿ ಎಂಬುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಒತ್ತಾಯಿಸಿದ್ದಾರೆ.

‘‘ಆ 18 ಜನರ ವಿಚಾರಣೆ ಇಸ್ತಾಂಬುಲ್‌ನಲ್ಲಿ ನಡೆಯಬೇಕು ಎನ್ನುವುದು ನನ್ನ ಆಗ್ರಹವಾಗಿದೆ’’ ಎಂದು ಸಂಸತ್ತಿನಲ್ಲಿ ಮಂಗಳವಾರ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

ನಿಷ್ಕ್ರಿಯಗೊಂಡ ಸಿಸಿಟಿವಿ ಕ್ಯಾಮರಗಳು

ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್ ಕಚೇರಿಯಲ್ಲಿ ಜಮಾಲ್ ಖಶೋಗಿಯ ಹತ್ಯೆ ನಡೆದ ಸಂದರ್ಭದಲ್ಲಿ ಕೌನ್ಸುಲೇಟ್‌ನಲ್ಲಿರುವ ಸಿಸಿಟಿವಿ ಕ್ಯಾಮರಗಳನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಲಾಗಿತ್ತು ಎಂದು ಎರ್ದೊಗಾನ್ ತಿಳಿಸಿದರು.

‘‘ಮೊದಲು ಅವರು (ಸೌದಿ ಏಜಂಟರು) ಕ್ಯಾಮರ ವ್ಯವಸ್ಥೆಯ ಹಾರ್ಡ್ ಡಿಸ್ಕನ್ನು ತೆಗೆದರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News