ಸೌದಿ ವಿವರಣೆಯಿಂದ ತೃಪ್ತಿಯಾಗಿಲ್ಲ: ಟ್ರಂಪ್ ತಿಪ್ಪರಲಾಗ

Update: 2018-10-23 16:06 GMT

ವಾಶಿಂಗ್ಟನ್, ಅ. 23: ಸೌದಿ ಪತ್ರಕರ್ತ ಜಮಾಲ್ ಖಶೋಗಿ ಸಾವಿನ ಬಗ್ಗೆ ಸೌದಿ ಅರೇಬಿಯ ನೀಡಿರುವ ವಿವರಣೆಯಿಂದ ನನಗೆ ತೃಪ್ತಿಯಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಆದರೆ, ಸೌದಿ ಅರೇಬಿಯದ 110 ಬಿಲಿಯ ಡಾಲರ್ ಹೂಡಿಕೆಯನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ ಎಂದಿದ್ದಾರೆ.

ಸೌದಿ ಕೌನ್ಸುಲೇಟ್‌ನಲ್ಲಿ ನಡೆದ ‘ಮುಷ್ಟಿ ಕಾಳಗ’ದಲ್ಲಿ ಜಮಾಲ್ ಮೃತಪಟ್ಟಿದ್ದಾರೆ ಎಂಬುದಾಗಿ ಸೌದಿ ಅರೇಬಿಯ ಮೂರು ದಿನಗಳ ಹಿಂದೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಈ ವಿವರಣೆಯಿಂದ ನನಗೆ ತೃಪ್ತಿಯಾಗಿದೆ ಎಂಬುದಾಗಿ ಅದರ ಬೆನ್ನಿಗೇ ಟ್ರಂಪ್ ಹೇಳಿದ್ದರು.

ಸೌದಿ ಅರೇಬಿಯ ಮತ್ತು ಟರ್ಕಿಯಿಂದ ಬರುವ ಅಮೆರಿಕ ಗುಪ್ತಚರ ತಂಡಗಳ ವರದಿಗಾಗಿ ನಾನು ಕಾಯುತ್ತಿದ್ದೇನೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ಹೇಳಿದರು.

‘‘ಟರ್ಕಿ ಮತ್ತು ಸೌದಿ ಅರೇಬಿಯದಲ್ಲಿ ನನ್ನ ಜನರಿದ್ದಾರೆ. ಅಲ್ಲಿ ಏನಾಗಿದೆ ಎನ್ನುವುದು ನಮಗೆ ಶೀಘ್ರವೇ ತಿಳಿಯುತ್ತದೆ. ನಮ್ಮ ಜನರು ಅತ್ಯಂತ ಪ್ರತಿಭಾವಂತರಾಗಿದ್ದು, ಅವರು ತಮ್ಮ ಕೆಲಸವನ್ನು ಸುಲಲಿತವಾಗಿ ಮಾಡುತ್ತಾರೆ. ಅವರು ಇಂದು ರಾತ್ರಿ ಅಥವಾ ನಾಳೆ ಅಮೆರಿಕಕ್ಕೆ ಬರುತ್ತಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News