ಅಮಿತ್ ಶಾ ದೇವಸ್ಥಾನದಲ್ಲಿದ್ದ ಕಾರಣ ಸಿಜೆಐ ಗೊಗೊಯ್‌ರನ್ನು ತಡೆದರು !

Update: 2018-10-23 16:18 GMT
ಫೋಟೊ ಕೃಪೆ: ANI

ಗುವಾಹಟಿ, ಅ.23: ಅಸ್ಸಾಂನ ಪ್ರಸಿದ್ಧ ಕಾಮಾಖ್ಯ ದೇವಸ್ಥಾನಕ್ಕೆ ಅ.17ರಂದು ದುರ್ಗಾಷ್ಟಮಿಯ ದಿನದಂದು ಪತ್ನಿ ಜೊತೆಗೆ ಭೇಟಿ ನೀಡಿದ್ದ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೊಯ್‌ರನ್ನು ಭದ್ರತಾ ಸಿಬ್ಬಂದಿ ದೇವಸ್ಥಾನದ ಒಳ ಪ್ರವೇಶಿಸಲು ಬಿಡದೆ ಹೊರಗೆ ಕೆಲ ಹೊತ್ತು ಕಾಯಿಸಿದ ಘಟನೆ ನಡೆದಿದೆ. ಅದಾಗಲೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ದೇವಸ್ಥಾನದ ಒಳಗಡೆಯಿದ್ದುದು ಇದಕ್ಕೆ ಕಾರಣವಾಗಿತ್ತು.

ಈ ಘಟನೆಗೆ ಸಿಜೆಐ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇವರಲ್ಲಿ ಹೆಚ್ಚುವರಿ ಉಪ ಆಯುಕ್ತ ಪುಲಕ್ ಮಹಾಂತಾ ಅವರು ಸಿಜೆಐಗೆ ಗೌರವ ರಕ್ಷೆ ನೀಡುವ ಮೊದಲು ಘಟನೆಗೆ ಕಾರಣ ನೀಡುವಾಗ ಸಿಜೆಐಗೆ ಅಗೌರವ ತರುವ ರೀತಿಯಲ್ಲಿ ವರ್ತಿಸಿದ್ದರು ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.

ಡಿಸಿಪಿ ಭನ್ವರ್‌ಲಾಲ್ ಮೀನಾ ಹಾಗೂ ಹೆಚ್ಚುವರಿ ಉಪ ಆಯುಕ್ತ ಪ್ರಶಾಂತ ಪ್ರತಿಮ್ ಕಥ್‌ಕೋಟಿಯಾರನ್ನು ಭದ್ರತಾ ವ್ಯವಸ್ಥೆಯ ಲೋಪಕ್ಕಾಗಿ ಅಮಾನತುಗೊಳಿಸಲಾಗಿದೆ. ದುರ್ಗಾಷ್ಠಮಿಯಂದು ಈ ಪ್ರಸಿದ್ಧ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಕೇವಲ 3 ಗಂಟೆ ಮಾತ್ರ ಅವಕಾಶ ನೀಡಲಾಗಿತ್ತು. ಆದ್ದರಿಂದ ದೇವಸ್ಥಾನಕ್ಕೆ ಎಲ್ಲೆಡೆಯಿಂದ ಭಕ್ತರು ಆಗಮಿಸಿದ್ದರು. ಜೊತೆಗೆ ಬಿಜೆಪಿ ಅಧ್ಯಕ್ಷರನ್ನು ಕಾಣಲು ಪಕ್ಷದ ಕಾರ್ಯಕರ್ತರೂ ದೇವಸ್ಥಾನದಲ್ಲಿ ಜಮಾಯಿಸಿದ್ದರು. ಇದರಿಂದ ಸಿಜೆಐ ಹಲವು ತಾಸು ದೇವಸ್ಥಾನದ ಹೊರಗೆ ಕಾಯುವ ಪರಿಸ್ಥಿತಿ ಬಂತು ಎಂದು ವರದಿಯಾಗಿದೆ.

ಘಟನೆಯನ್ನು ಖಂಡಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ದೇಬರಥ ಸೈಕಿಯಾ, ಬಿಜೆಪಿ ಸರಕಾರ ವ್ಯಕ್ತಿಪೂಜೆಗೆ ಮಹತ್ವ ನೀಡುತ್ತಿದೆ. ರಾಜಕೀಯ ಮುಖಂಡರನ್ನು ದೇವಸ್ಥಾನದೊಳಗೆ ಕುಳ್ಳಿರಿಸಿ ಉಪಚರಿಸುತ್ತಿದ್ದಾಗ ದೇಶದ ಮುಖ್ಯ ನ್ಯಾಯಾಧೀಶರು ಹೊರಗೆ ನಿಂತು ಕಾಯುವಂತಾಗಿದೆ ಎಂದು ಟೀಕಿಸಿದ್ದಾರೆ. ಶಿಷ್ಟಾಚಾರದಂತೆ ಸಿಜೆಐಗೆ ಯಾವುದೇ ರಾಜಕೀಯ ಮುಖಂಡರಿಗಿಂತ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆದರೆ ರಾಜ್ಯ ಸರಕಾರ ಈ ಕುರಿತು ಗೊಂದಲ ಮೂಡಿಸಿ ಬಳಿಕ ಅಧಿಕಾರಿಗಳನ್ನು ಬಲಿಪಶು ಮಾಡಿದೆ ಎಂದು ಆರೋಪಿಸಿರುವ ಅವರು ತಕ್ಷಣ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News