2 ವರ್ಷದ ಪುತ್ರಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ರೈತ ದಂಪತಿ
ಮುಂಬೈ,ಅ.23: ರೈತ ದಂಪತಿ ತಮ್ಮ ಎರಡು ವರ್ಷ ಪ್ರಾಯದ ಪುತ್ರಿಯನ್ನು ಕೊಂದು,ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಹ್ಮದ್‌ನಗರ ಜಿಲ್ಲೆಯ ಅಕೋಲೆ ತಾಲೂಕಿನ ಚಾಸ್ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು,ಈ ಅತಿರೇಕದ ಕ್ರಮಕ್ಕೆ ಕಾರಣವಿನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಮಂಗಳವಾರ ತಿಳಿಸಿದರು. ರೈತ ಪಾಂಡುರಂಗ ಶೆಳ್ಕೆ(31),ಪತ್ನಿ ಸೋನಾಲಿ(26) ಮತ್ತು ಪುತ್ರಿ ಶ್ರೀವನ್ಯಾ ಶವಗಳು ಗ್ರಾಮದಿಂದ ಮೂರು ಕಿ.ಮೀ .ದೂರದಲ್ಲಿರುವ ಅವರ ತೋಟದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಶವಗಳು ಕೊಳೆಯತೊಡಗಿದ್ದು ಕನಿಷ್ಠ 30 ಗಂಟೆಗಳ ಮೊದಲು ಸಾವುಗಳು ಸಂಭವಿಸಿವೆ. ಘಟನೆ ಸಂಭವಿಸಿದಾಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ ಮತ್ತು ಬಾಗಿಲುಗಳನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು. ಶೆಳ್ಕೆಯನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿಯೋರ್ವ ತೆರೆದ ಕಿಟಕಿಯಿಂದ ಇಣುಕಿ ನೋಡಿದಾಗ ನೇಣುಗಳಲ್ಲಿ ಶವಗಳು ತೂಗಾಡುತ್ತಿದ್ದದು ಬೆಳಕಿಗೆ ಬಂದಿತ್ತು.ಶೆಳ್ಕೆ ಸ್ಥಳೀಯ ಸೊಸೈಟಿಯಲ್ಲಿ ಸ್ವಲ್ಪ ಸಾಲ ಪಡೆದಿದ್ದರು. ಆದರೆ ಆತ್ಮಹತ್ಯೆಗೆ ಇದೇ ಕಾರಣವೆಂದು ಈಗಲೇ ಹೇಳುವಂತಿಲ್ಲ ಎಂದು ಪೊಲೀಸರು ಹೇಳಿದರು.