ಕೇಂದ್ರದ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ

Update: 2018-10-23 18:03 GMT

ಹೊಸದಿಲ್ಲಿ,ಅ.23: ಆರು ದಶಕಗಳ ಹಿಂದಿನ ನಾಗರಿಕ ಕಾಯ್ದೆಗೆ ತಿದ್ದುಪಡಿ ಮಾಡಲಾಗಿರುವ ವಿವಾದಾತ್ಮಕ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲನೆ ನಡೆಸಿದ್ದು ಅದರ ವರದಿಯು ಡಿಸೆಂಬರ್‌ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮಸೂದೆಗೆ ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಪ್ರಸ್ತಾವಿತ ಕಾಯ್ದೆಯನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕೇಂದ್ರ ಸರಕಾರದ ವಿರುದ್ಧ ಅಸ್ಸಾಂನಲ್ಲಿ ಮಂಗಳವಾರ 46 ಸಂಘಟನೆಗಳು 12 ಗಂಟೆಗಳ ಬಂದ್ ನಡೆಸಿದವು. ಚಳಿಗಾಲದ ಅಧಿವೇಶನವು 16ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿದೆ. ನಾವು ನಮ್ಮ ವರದಿಯನ್ನು ಸಲ್ಲಿಸದಿದ್ದರೆ ನಾವು ನಮ್ಮ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದು ಅರ್ಥ. ಅದರೊಂದಿಗೆ ಸಮಿತಿಯೂ ವಜಾಗೊಳ್ಳುತ್ತದೆ ಎಂದು ಸಮಿತಿಯ ಮುಖ್ಯಸ್ಥ ಮತ್ತು ಮೀರತ್‌ನ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ತಿಳಿಸಿದ್ದಾರೆ.

1955ರ ನಾಗರಿಕ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ನಾಗರಿಕ (ತಿದ್ದುಪಡಿ) ಕಾಯ್ದೆ,2016ರನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಅಫ್ಘಾನಿಸ್ತಾನ,ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದು, ಸಿಖ್,ಬೌದ್ಧ,ಜೈನ, ಪಾರ್ಸಿ ಮತ್ತು ಕ್ರೈಸ್ತ ಮುಂತಾದ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಅವರು ಭಾರತದಲ್ಲಿ, ಈ ಹಿಂದೆ ಇದ್ದ ಹನ್ನೆರಡು ವರ್ಷಗಳ ಬದಲಾಗಿ,ಆರು ವರ್ಷಗಳಿಂದ ನೆಲೆಸಿದ್ದರೆ ಅವರಿಗೆ ಪೌರತ್ವವನ್ನು ನೀಡಲು ಈ ತಿದ್ದುಪಡಿ ಮಸೂದೆಯಲ್ಲಿ ಸೂಚಿಸಲಾಗಿದೆ.

ಈ ಮಸೂದೆಯು 1985ರ ಅಸ್ಸಾಂ ಒಪ್ಪಂದವನ್ನು ರದ್ದುಗೊಳಿಸುತ್ತದೆ. ಈ ಒಪ್ಪಂದದ ಪ್ರಕಾರ, ಎಲ್ಲ ಧರ್ಮದ ಎಲ್ಲ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಅಂತಿಮ ದಿನಾಂಕವನ್ನು 1971ರ ಮಾರ್ಚ್ 24 ಎಂದು ನಿಗದಿಪಡಿಸಲಾಗಿತ್ತು ಎಂದು ಈಶಾನ್ಯ ರಾಜ್ಯದ ಜನರು ಮತ್ತು ಸಂಘಟನೆಗಳು ಆರೋಪಿಸಿ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News