×
Ad

ಸೈನಾ, ಶ್ರೀಕಾಂತ್ ದ್ವಿತೀಯ ಸುತ್ತಿಗೆ ಲಗ್ಗೆ

Update: 2018-10-24 23:42 IST

ಪ್ಯಾರಿಸ್, ಅ.24: ಹಾಲಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಹಾಗೂ ವಿಶ್ವದ ನಂ.10ನೇ ಆಟಗಾರ್ತಿ ಸೈನಾ ನೆಹ್ವಾಲ್ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದ್ವಿತೀಯ ಸುತ್ತಿಗೆ ತಲುಪಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 21-19, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ವಿಶ್ವದ ನಂ.6ನೇ ಆಟಗಾರ ಶ್ರೀಕಾಂತ್ ಎರಡನೇ ಪಂದ್ಯದಲ್ಲಿ ಕೊರಿಯಾದ ಡಾಂಗ್ ಕೆಯುನ್ ಲೀ ಅವರನ್ನು ಎದುರಿಸಲಿದ್ದಾರೆ. ವಿಶ್ವದ ನಂ.29ನೇ ಆಟಗಾರ ಲೀ ಅವರು ಶ್ರೀಕಾಂತ್ ವಿರುದ್ಧ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಕಳೆದ ತಿಂಗಳು ಜಪಾನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್‌ಗೆ ಸೋಲುಣಿಸಿದ್ದರು.

ಇದೇ ವೇಳೆ, ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಮೀರ್ ವರ್ಮಾ ಇಂಡೋನೇಶ್ಯಾದ ಜೋನಾಥನ್ ಕ್ರಿಸ್ಟಿ ವಿರುದ್ಧ 21-16, 17-21, 15-21 ಅಂತರದಿಂದ ಸೋತಿದ್ದಾರೆ.

 ಮಹಿಳೆಯರ ಮೊದಲ ಸಿಂಗಲ್ಸ್‌ನಲ್ಲಿ ಸೈನಾ ಜಪಾನ್‌ನ ಸಾಯೆನಾ ಕವಾಕಮಿ ವಿರುದ್ಧ 21-11, 21-11 ಅಂತರದಿಂದ ಜಯ ಸಾಧಿಸಿದ್ದಾರೆ.ಸೈನಾ ಮುಂದಿನ ಸುತ್ತಿನಲ್ಲಿ ಜಪಾನ್‌ನ ನೊರೊಮಿ ಒಕುಹರಾರನ್ನು ಎದುರಿಸಲಿದ್ದಾರೆ. ಸೈನಾ ಡೆನ್ಮಾರ್ಕ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಒಕುಹರಾರನ್ನು ಸೋಲಿಸಿದ್ದರು. ಜಪಾನ್‌ನ ಮಾಜಿ ವಿಶ್ವ ಚಾಂಪಿಯನ್ ಒಕುಹರಾ ಭಾರತದ ಆಟಗಾರ್ತಿಗೆ ಯಾವಾಗಲೂ ಕಠಿಣ ಸವಾಲು ಒಡ್ಡುತ್ತಾರೆ.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಕೊರಿಯಾದ ಮಿನ್ ಹಿಯುಕ್ ಕಾಂಗ್ ಹಾಗೂ ಕಿಮ್ ವಾನ್ ಹೊ ವಿರುದ್ಧ 21-18, 21-17 ಅಂತರದಿಂದ ಜಯ ಸಾಧಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಇಂಗ್ಲೆಂಡ್‌ನ ಕ್ರಿಸ್ ಅಡ್‌ಕಾಕ್ ಹಾಗೂ ಗ್ಯಾಬ್ರಿಯೆಲ್ಲಾ ವಿರುದ್ಧ 22-24, 21-18, 19-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News