×
Ad

ಆಸ್ಟ್ರೇಲಿಯ ‘ಎ’ ತಂಡಕ್ಕೆ ಸೋಲುಣಿಸಿದ ಭಾರತ ‘ಎ’

Update: 2018-10-24 23:51 IST

ಮುಂಬೈ, ಅ.24: ಮಿಥಾಲಿ ರಾಜ್ ಔಟಾಗದೆ ಸಿಡಿಸಿದ ಶತಕದ ಸಹಾಯದಿಂದ ಭಾರತ ‘ಎ’ ಮಹಿಳಾ ತಂಡ ಆಸ್ಟ್ರೇಲಿಯ ‘ಎ’ ತಂಡವನ್ನು ಬುಧವಾರ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ 28 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಹಿರಿಯ ಆಟಗಾರ್ತಿ ಮಿಥಾಲಿ ಅವರು ಸ್ಮತಿ ಮಂಧಾನರೊಂದಿಗೆ ಇನಿಂಗ್ಸ್ ಆರಂಭಿಸಿದರು. ಆಸ್ಟ್ರೇಲಿಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಮಿಥಾಲಿ ಕೇವಲ 61 ಎಸೆತಗಳಲ್ಲಿ 18 ಬೌಂಡರಿ, 1 ಸಿಕ್ಸರ್‌ಗಳ ಸಹಿತ ಔಟಾಗದೆ 105 ರನ್ ಗಳಿಸಿದರು. ಈ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಈ ಹಿಂದೆ 102 ರನ್ ಗಳಿಸಿದ್ದ ಸ್ಮತಿ ದಾಖಲೆಯನ್ನು ಮುರಿದರು.

31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಿಥಾಲಿ 59 ಎಸೆತಗಳಲ್ಲಿ ಶತಕ ಪೂರೈಸಿದರು. ಮಿಥಾಲಿ ಶತಕ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕದ(57,33 ಎಸೆತ, 6 ಬೌಂಡರಿ, 3 ಸಿಕ್ಸರ್)ಕೊಡುಗೆ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 184 ರನ್ ಗಳಿಸಿತು. ಈ ಇಬ್ಬರು 85 ರನ್ ಜೊತೆಯಾಟ ನಡೆಸಿದರು. ಗೆಲ್ಲಲು ಕಠಿಣ ಸವಾಲು ಪಡೆದ ಆಸ್ಟ್ರೇಲಿಯವನ್ನು ಭಾರತದ ಬೌಲರ್‌ಗಳಾದ ದೀಪ್ತಿ ಶರ್ಮಾ(2-32), ಪೂನಂ ಯಾದವ್(2-29) ಹಾಗೂ ಅನುಜಾ ಪಾಟೀಲ್(2-31) 9 ವಿಕೆಟ್‌ಗೆ 156 ರನ್‌ಗೆ ನಿಯಂತ್ರಿಸಿದರು. ಆಸೀಸ್ ಪರ ಆರಂಭಿಕ ಆಟಗಾರ್ತಿ ತಹಿಲಾ ಮೆಕ್‌ಗ್ರಾತ್(47) ಏಕಾಂಗಿ ಹೋರಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News