ಇವಿಎಂಗಳ ಬಗ್ಗೆ ನನಗೆ ಈಗಲೂ ಅನುಮಾನ ಇದೆ : ಸಿದ್ದರಾಮಯ್ಯ

Update: 2018-10-25 12:45 GMT

ಬೈಂದೂರು, ಅ.25: ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೈಂದೂರಿನ ನಾಗೂರಿಗೆ ಆಗಮಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಮತದಾರರು ನಮ್ಮ ಕೈ ಹಿಡಿಯಲಿಲ್ಲ. ನಾವು ಮಾಡಿದ ತಪ್ಪಾದರೂ ಏನು ? ನಮ್ಮ ಸರ್ಕಾರ ಜಾರಿಗೆ ತಂದ ಹಲವಾರು ಜನಪರ ಯೋಜನೆಗಳನ್ನು ದೇಶದ ಯಾವ ರಾಜ್ಯ ಸರ್ಕಾರಗಳೂ ಜಾರಿಗೆ ತರಲಿಲ್ಲ. ಕೇವಲ ಹಿಂದುತ್ವ ವಾದದಿಂದ ಬಡವರ ಹೊಟ್ಟೆ ತುಂಬುವುದೇ ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಂಸದರಾಗಿ ಯಡಿಯೂರಪ್ಪ ಅವರು ಒಂದು ದಿನವೂ ಬೈಂದೂರಿಗೆ ಬರಲಿಲ್ಲ.‌ ಅಂತಹವರಿಗೆ ಮತ ಹಾಕಬೇಕೇ ? ಹಿಂದಿನ ಶಾಸಕರಾದ ಗೋಪಾಲ ಪೂಜಾರಿ ಅವರು ಎರಡು ಸಾವಿರ ಕೋಟಿ ರೂ.ಗಳ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದರು. ಒಬ್ಬ ಶಾಸಕರಾಗಿ ಅವರು ಇನ್ನೇನು ಮಾಡಬೇಕಿತ್ತು. ಆದರೂ ಅವರಿಗೆ ಸೋಲಾಯಿತು. ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ನನಗೆ ಈಗಲೂ ಅನುಮಾನ ಇದೆ ಎಂದು ಹೇಳಿದರು.

ಯಡಿಯೂರಪ್ಪ ಅವರು ಒಬ್ಬರೇನಾ ಹಿಂದೂ. ನಾನು ಹಿಂದೂ ಅಲ್ಲವೇ ? ಹಿಂದುತ್ವದ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅದಕ್ಕೆ ಮರುಳಾಗಬಾರದು. ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಒಬ್ಬರಿಗಾದರೂ ಉದ್ಯೋಗ ಬಂದಿದೆಯೇ ? ಇರುವ ಉದ್ಯೋಗವೂ ಕಳೆದುಕೊಳ್ಳುವ ನ್ನಿವೇಶ ನಿರ್ಮಾಣ ಆಗಿದೆ. ಮನ್ ಕೀ ಬಾತ್ ಹೆಸರಲ್ಲಿ ನರೇಂದ್ರ ಮೋದಿಯವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಕೊಟ್ಟ ಭರವಸೆಗಳ ಪೈಕಿ ಒಂದನ್ನೂ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಯಾವ ಆಧಾರದ ಮೇಲೆ ಯಡಿಯೂರಪ್ಪ ಇಲ್ಲಿಗೆ ಬಂದು ಮತ ಕೇಳುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಕರಾವಳಿ ಭಾಗದ ಜನ ಯಾವ ಕಾರಣಕ್ಕೆ ಬಿಜೆಪಿಗೆ ವೋಟು ಕೊಟ್ಟರು ಎಂಬುದು ಅರ್ಥವಾಗುತ್ತಿಲ್ಲ. ನಿಮ್ಮ ದನ ಕರುಗಳು ಕೊಟ್ಟಿಗೆಗೆ ಬರಬೇಕೇ, ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆ ಸೇರಬೇಕೇ ? ಹಾಗಿದ್ದರೆ ಬಿಜೆಪಿಗೆ ಮತ ಕೊಡಿ ಎಂದು ಈ ಭಾಗದಲ್ಲಿ ಪ್ರಚಾರ ಮಾಡಿದರು. ಈಗ ಸಮ್ಮಿಶ್ರ ಸರ್ಕಾರ ಇದೆ. ಹಾಗಾದರೆ ದನ ಕರುಗಳು ಕೊಟ್ಟಿಗೆಗೆ ಬರುತ್ತಿಲ್ಲವೇ ? ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲವೇ ? ಚುನಾವಣೆಗೆ ಮುನ್ನ ಜನರಿಗೆ ನೀಡಿದ್ದ ಭರವಸೆಗಳ ಪೈಕಿ ಒಂದನ್ನೂ ಈಡೇರಿಸಿಲ್ಲ.‌ ಚುನಾವಣೆ ಸಂದರ್ಭದಲ್ಲಿ ಪೊಳ್ಳು ಭರವಸೆಗಳನ್ನು ನೀಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಮತ ಕೊಡಲಿಲ್ಲ. ಈ ಮರು ಚುನಾವಣೆಯಲ್ಲಾದರೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲುಸಿ. ಇದರಿಂದ ಬಂಗಾರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಮನವಿ ಮಾಡಿದರೂ ಮತದಾರರು ಮನಸು ಮಾಡಲಿಲ್ಲ. ಈಗ ಬಡ್ಡಿ ಸಮೇತ ಕೂಲಿ ಕೊಡಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಅರೆ ಶಿರೂರು ಹೆಲಿಪ್ಯಾಡ್ ಗೆ ಸಿದ್ದರಾಮಯ್ಯ ಆಗಮಿಸಿ‌ದಾಗ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹಾಗೂ ಇತರ ನಾಯಕರು ಅವರನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News