×
Ad

ಪ್ರಧಾನಿ ಕಚೇರಿಯ ಅಧಿಕಾರಿಗಳ ರಕ್ಷಣೆಯ ತುರ್ತಿನಲ್ಲಿ ಸಿಬಿಐ ದಾಖಲೆಗಳ ಭವಿಷ್ಯ ಅಯೋಮಯ?

Update: 2018-10-25 22:18 IST

ಕಾನೂನಿನ ಪ್ರಕಾರ ಸಿಬಿಐ ನಿರ್ದೇಶಕರ ನಿಗದಿತ ಅಧಿಕಾರಾವಧಿ ಕನಿಷ್ಠ ಎರಡು ವರ್ಷ ಆಗಿದ್ದರೂ, ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯ ಹಾಲಿ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ದಿಢೀರನೇ ಪದಚ್ಯುತಗೊಳಿಸಲಾಗಿದ್ದು, ಈ ಕ್ರಮವನ್ನು ಅವರು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದಾರೆ. ಆದರೆ ಸರ್ಕಾರದ ಉನ್ನತ ಹಂತದವರೆಗೂ ತಲುಪಿದ್ದ ದೋಷಾರೋಪಣೆ ದೂರವಾಣಿ ಕರೆಯ ದಾಖಲೆಗಳೂ ಸೇರಿದಂತೆ, ತನ್ನದೇ ಅತ್ಯುನ್ನತ ಅಧಿಕಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಸಂಗ್ರಹಿಸಿದ ಮಹತ್ವದ ದಾಖಲೆಗಳ ಭವಿಷ್ಯವೇನು ಎಂಬ ಚಿಂತೆ ಸಿಬಿಐ ಅಧಿಕಾರಿಗಳನ್ನು ಕಾಡುತ್ತಿದೆ.

ಬುಧವಾರ ಮುಂಜಾನೆ ಸರ್ಕಾರ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವವರನ್ನು ರಜೆ ಮೇಲೆ ಕಳುಹಿಸಿದೆ. ಇದು ಅಕ್ಷರಶಃ ಪದಚ್ಯುತಿ ಮಾಡಿದಂತೆ. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನೂ ಸರ್ಕಾರ ರಜೆ ಮೇಲೆ ಕಳುಹಿಸಿದ್ದು, ಐಜಿ ದರ್ಜೆಯ ಅಧಿಕಾರಿ ಎಂ.ನಾಗೇಶ್ವರ ರಾವ್ ಅವರಿಗೆ ಏಜೆನ್ಸಿಯ ಉಸ್ತುವಾರಿ ಹೊಣೆ ವಹಿಸಿದೆ.

ಸಿಬಿಐ ನಿರ್ದೇಶಕ ಹುದ್ದೆ ಕಳೆದುಕೊಂಡಿರುವ ವರ್ಮಾ ಅವರು ಸುಪ್ರೀಂಕೋರ್ಟ್‍ನಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದು, ಸರ್ಕಾರ ಇಚ್ಛಿಸಿದ ರೀತಿಯಲ್ಲಿ ತನಿಖೆ ನಡೆಸದ ಕಾರಣಕ್ಕಾಗಿ ತಮ್ಮನ್ನು ಶಿಕ್ಷಿಸಲಾಗಿದೆ ಎಂದು ದಾವೆಯಲ್ಲಿ ಆಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಎನಿಸಿಕೊಂಡಿದ್ದ ಅಸ್ತಾನ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ವರ್ಮಾ, ಮೋದಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಜತೆಗೆ ರಫೇಲ್ ಒಪ್ಪಂದದ ತನಿಖೆಯಲ್ಲಿ ವರ್ಮಾ ಆಸಕ್ತಿ ತೋರಿಸಿದ್ದು, ಇವುಗಳ ದಾಖಲಾತಿಗಳ ಸುದ್ದಿ ಅತ್ಯುನ್ನತ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿತ್ತು.

ಈ ದಾಖಲೆಗಳಿಂದ ದೃಢಪಟ್ಟಿರುವಂತೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ಎಫ್‍ಐಆರ್‍ನಲ್ಲಿ ದಾಖಲಿಸಿರುವಂತೆ ಇದು ಕೇವಲ ಲಂಚ ಮತ್ತು ಭ್ರಷ್ಟಾಚಾರದ ಪ್ರಕರಣವಲ್ಲ. ಬದಲಾಗಿ ಸಿಬಿಐ ಹೇಳುವಂತೆ ಸರ್ಕಾರದ ಇತರ ಶಾಖೆಗಳ ಅದರಲ್ಲೂ ಮುಖ್ಯವಾಗಿ ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ಆರ್‍ಎಡಬ್ಲ್ಯು) ಮತ್ತು ಪ್ರಧಾನಿ ಕಚೇರಿಯ ಅಧಿಕಾರಿಗಳು ಕೂಡಾ ಈ ವಸೂಲಿ ದಂಧೆಯಲ್ಲಿ ಶಾಮೀಲಾಗಿದ್ದು, ದೇಶದ ಭದ್ರತೆ ಮೇಲೂ ಇದು ಪರಿಣಾಮ ಬೀರಲಿದೆ.

ಇವುಗಳನ್ನು ಬಹಿರಂಗಪಡಿಸಿದ್ದರೆ, ಈ ವಿವರಗಳು ಪ್ರಧಾನಿ ನರೇಂದ್ರ ಮೋದಿಯವರಿಗೂ ಮುಜುಗರ ತರುವಂತಹ ವಿಚಾರವಾಗಿತ್ತು. ಅಧಿಕಾರಿಗಳು ಹೇಳುವಂತೆ ನಿರ್ದಿಷ್ಟ ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧದ ವಿಚಾರಣೆಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಯ ಉನ್ನತ ಅಧಿಕಾರಿಗಳು ಮಾಡಿದ ದೂರವಾಣಿ ಸಂಭಾಷಣೆಯ ವಿವರಗಳು ಮತ್ತು ಸಂದೇಶ ವಿವರಗಳು ಸಿಬಿಐ ಹೊಂದಿರುವ ದಾಖಲೆಗಳಲ್ಲಿ ಸೇರಿವೆ. ಈ ಉನ್ನತ ಅಧಿಕಾರಿಗಳು ಅಸ್ತಾನ ಅವರಿಗೆ ಆಪ್ತರಾಗಿದ್ದವರು ಎನ್ನಲಾಗಿದೆ. ರಾಕೇಶ್ ತಿವಾರಿ ಪ್ರಕರಣದಲ್ಲಿ ಪ್ರಧಾನಿ ಕಚೇರಿಯ ಉನ್ನತ ಅಧಿಕಾರಿಯೊಬ್ಬರನ್ನು ಕೂಡಾ ವಿಚಾರಣೆಗೆ ಗುರಿಪಡಿಸಲಾಗಿದೆ. ಸಿಬಿಐ ಅಧಿಕಾರಿಗಳು ಹೇಳುವಂತೆ ಪ್ರಧಾನಿ ಕಚೇರಿಯ ಈ ಅಧಿಕಾರಿ, ಉಚಿತವಾಗಿ ಪಾರ್ಟಿಗಳನ್ನು ಆಯೋಜಿಸುವುದು ಸೇರಿದಂತೆ ತಿವಾರಿಯವರಿಂದ ಹಲವು ಪ್ರಯೋಜನಗಳನ್ನು ಅಪೇಕ್ಷಿಸಿದ್ದರು.

ಸಿಬಿಐನಲ್ಲಿ ಉದ್ಭವಿಸಿರುವ ಸಂಘರ್ಷ ಹಿಂದೆಂದೂ ಕಂಡರಿಯದ ವಿಚಾರವಾಗಿದ್ದರೆ, ರಾ (ಆರ್‍ಎಡಬ್ಲ್ಯು)ನಲ್ಲಿ ಕೂಡಾ ಇಂಥದ್ದೇ ಪರಿಸ್ಥಿತಿ ಇದೆ. ಅಸ್ತಾನ ವಿರುದ್ಧ ದಾಖಲಿಸಿರುವ ಎಫ್‍ಐಆರ್‍ನಲ್ಲಿ ಸಿಬಿಐ, ರಾ ಸಂಸ್ಥೆಯ ಒಬ್ಬ ಉನ್ನತ ಅಧಿಕಾರಿ, ಪಂಜಾಬ್ ಕೇಡರ್ ಐಪಿಎಸ್ ಅಧಿಕಾರಿ ಸಮಂತ್ ಗೋಯಲ್ ಅವರನ್ನು ಹೆಸರಿಸಿದೆ. ಮೋಯಿನ್ ಖುರೇಷಿ ವಿರುದ್ಧದ ಪ್ರಕರಣವನ್ನು ದುರ್ಬಲಗೊಳಿಸುವಲ್ಲಿ ಅಸ್ತಾನ ಜತೆ ಗೋಯಲ್ ಕೂಡಾ ಮಹತ್ವದ ಪಾತ್ರ ವಹಿಸಿದ್ದರು ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲು ಸಿಬಿಐ ಉದ್ದೇಶಿಸಿತ್ತು ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅಸ್ತಾನ ಜತೆ ಷಾಮೀಲಾಗಿ ಗೋಯಲ್ ಕೂಡಾ ಸುಲಿಗೆ ದಂಧೆ ನಡೆಸುತ್ತಿದ್ದರು ಎಂಬ ಆರೋಪವನ್ನು ಹೊರಿಸಲು ಕೂಡಾ ಸಿಬಿಐ ಸಿದ್ಧತೆ ನಡೆಸಿತ್ತು.

ಸಿಬಿಐನ ಮೂರನೇ ಅತ್ಯುನ್ನತದ ಹುದ್ದೆಯಲ್ಲಿದ್ದ ಎ.ಕೆ.ಶರ್ಮಾ ಅವರ ಫೋನ್ ಕದ್ದಾಲಿಕೆ ಸೇರಿದಂತೆ ಅವರ ಚಲನವಲನಗಳ ಬೇಹುಗಾರಿಕೆಗೆ ಗೋಯಲ್ ಅವರು ರಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದೂ ಅಧಿಕಾರಿಗಳು ಹೇಳುತ್ತಾರೆ. ಶರ್ಮಾ ಅವರು ಮತ್ತೊಬ್ಬ ರಾ ಅಧಿಕಾರಿ ಕೆ.ಇಳ್ಳಂಗೊ ಅವರಿಗೆ ಆಪ್ತರಾಗಿದ್ದರು ಎಂದು ಹೇಳಲಾಗಿದೆ. ಭಾರತದ ಬಾಹ್ಯ ಬೇಹುಗಾರಿಕಾ ಏಜೆನ್ಸಿ ಎನಿಸಿದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಅತ್ಯುನ್ನತ ಹುದ್ದೆಗೆ ಗೋಯಲ್ ಹಾಗೂ ಇಳ್ಳಂಗೊ ಪೈಪೋಟಿಯಲ್ಲಿದ್ದರು. ಶರ್ಮಾ ಅವರ ದೂರವಾಣಿ ಕದ್ದಾಲಿಕೆ ಮತ್ತು ಅವರ ವಿರುದ್ಧ ಬೇಹುಗಾರಿಕೆ ನಡೆಸುವ ಜತೆಗೆ ಗೋಯಲ್, ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹೀಂದ್ರ ರಾಜಪಕ್ಸೆ ಅವರ ವಿರುದ್ಧ ವಿರೋಧ ಪಕ್ಷಗಳ ರಾಜಕಾರಣಿಗಳು ಒಗ್ಗಟ್ಟಾಗಲು ನೆರವಾದ ಹಿನ್ನೆಲೆಯಲ್ಲಿ ಇಳ್ಳಂಗೊ ಹೇಗೆ ರಾ ಮುಖ್ಯಸ್ಥರಾಗಲು ಅನರ್ಹರು ಎಂಬ ಬಗ್ಗೆ ಮಾಧ್ಯಮದಲ್ಲಿ ಸುಳ್ಳುವರದಿ ಸೃಷ್ಟಿಸಿ ಹಬ್ಬಿಸುವಲ್ಲಿ ಕೂಡಾ ಮಹತ್ವದ ಪಾತ್ರ ವಹಿಸಿದ್ದರು ಎನ್ನುವುದು ಸಿಬಿಐ ಅಧಿಕಾರಿಗಳ ಆರೋಪ.

ಸಿಬಿಐ ಅಧಿಕಾರಿಗಳು ಹೇಳುವಂತೆ ಗೋಯಲ್, ಅಸ್ತಾನ ಪ್ರಕರಣದಲ್ಲಿ ಸಿಬಿಐ ಬಂಧಿಸಿದ ಮಧ್ಯವರ್ತಿ ಮನೋಜ್ ಪ್ರಸಾದ್ ಎಂಬಾತನ ಸಹಚರ. ಪ್ರಸಾದ್, ಸಹಾರಾ ಉದ್ಯಮ ಸಮೂಹದ ಅತ್ಯುನ್ನತ ಅಧಿಕಾರಿಯೊಬ್ಬರ ಸಂಬಂಧಿ. ಸಿಬಿಐ ಪಡೆದಿರುವ ದೂರವಾಣಿ ಸಂಭಾಷಣೆಯ ದಾಖಲೆಗಳ ಪ್ರಕಾರ, ಮೊಯಿನ್ ಖುರೇಷಿ ಪ್ರಕರಣದಲ್ಲಿ ಸೋಮೇಶ್ ಪ್ರಸಾದ್ ಎಂಬ ಶಂಕಿತನಿಗೆ ಸಿಬಿಐ ನ್ಯಾಯಾಲಯದ ಮುಂದೆ ಹಾಜರಾಗದಂತೆ ಗೋಯಲ್ ಎಚ್ಚರಿಕೆ ನೀಡಿದ್ದರು. ಇದು ಸಾಕ್ಷ್ಯನಾಶದ ಪ್ರಕರಣವಾಗುತ್ತದೆ ಎನ್ನುವುದು ಸಿಬಿಐ ಅಧಿಕಾರಿಗಳ ವಾದ.

ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಸನ್ನದಿನ ಪ್ರಕಾರ, ಏಜೆನ್ಸಿ ಅಧಿಕಾರಿಗಳು ಯಾವುದೇ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. "ಸಂಸ್ಥೆಯ ಇತಿಹಾಸದಲ್ಲೇ ಇಂಥ ಹಸ್ತಕ್ಷೇಪ ಇದೇ ಮೊದಲು" ಎಂದು ಅವರು ಹೇಳುತ್ತಾರೆ.

ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಹುದ್ದೆಗೆ ಪ್ರಧಾನಿ ಕಚೇರಿಯ ಉನ್ನತ ಅಧಿಕಾರಿ ಭಾಸ್ಕರ್ ಖುಬ್ಳೆಯವರ ಮೂಲಕ ನೇಮಕ ಮಾಡಿಸುವುದಾಗಿ ಅಸ್ತಾನ, ಗೋಯಲ್‍ಗೆ ಭರವಸೆ ನೀಡಿದ್ದರು ಎಂದು ಸಿಬಿಐ ಅಧಿಕಾರಿ ಹೇಳುತ್ತಾರೆ. ಖುಬ್ಳೆಯವರನ್ನು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಸ್ತಾನ ತನಿಖೆ ಮಾಡುತ್ತಿದ್ದರು. ಖುಬ್ಳೆಯವರನ್ನು ಕಲ್ಲಿದ್ದಲು ಹಗರಣದಲ್ಲಿ ಆರೋಪಿಯಾಗಿ ಹೆಸರಿಸಲು ಸಿಬಿಐ ಶಿಫಾರಸ್ಸು ಮಾಡಿತ್ತು. ಆದರೆ ಅಸ್ತಾನ ಅದನ್ನು ತಡೆದು ಕೇವಲ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರಭಾವ ಬೀರಿದ್ದಾರೆ ಎನ್ನುವ ಬಗ್ಗೆ "ದ ವೈರ್" ಹಿಂದೆ ವರದಿ ಮಾಡಿತ್ತು.

ಲಾಲೂ ಪ್ರಸಾದ್ ಯಾದವ್ ಐಆರ್‍ಸಿಟಿಸಿ ಹಗರಣದಲ್ಲಿ ಕೆಲ ಸಿಬಿಐ ಹಾಗೂ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಆರೋಪ ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಪ್ರಖ್ಯಾತ ವಕೀಲರೊಬ್ಬರು ಅಸ್ತಾನ ಜತೆಗೆ ನಿಕಟ ಸಂಬಂಧ ಹೊಂದಿದ್ದರು ಹಾಗೂ 2016ರಲ್ಲಿ ಅಹ್ಮದಾಬಾದ್‍ನಲ್ಲಿ ನಡೆದ ಅವರ ಮಗಳ ವಿವಾಹಕ್ಕೂ ಹಾಜರಾಗಿದ್ದರು ಎನ್ನುವುದು ಸಿಬಿಐ ತನಿಖೆಯಿಂದ ತಿಳಿದುಬಂದಿತ್ತು.

Writer - ರೋಹಿಣಿ ಸಿಂಗ್, thewire.in

contributor

Editor - ರೋಹಿಣಿ ಸಿಂಗ್, thewire.in

contributor

Similar News