ಬ್ರಹ್ಮಾವರ ಕೃಷಿಮೇಳದ 150ಕ್ಕೂ ಅಧಿಕ ಮಳಿಗೆಗಳಲ್ಲಿ ಕೃಷಿ ವಸ್ತು ಪ್ರದರ್ಶನ

Update: 2018-10-27 11:47 GMT

ಬ್ರಹ್ಮಾವರ, ಅ.27: ಕರವಾಳಿ ಕರ್ನಾಟಕದ 40 ಕೆಂಪಕ್ಕಿ ಸೇರಿದಂತೆ ಒಟ್ಟು 200 ದೇಶಿ ಭತ್ತದ ತಳಿಗಳನ್ನು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಇಂದಿನಿಂದ ಆರಂಭಗೊಂಡ ಎರಡು ದಿನಗಳ ಕೃಷಿ ಮೇಳದ ಕೃಷಿ ತಂತ್ರಜ್ಞಾನ ಸಪ್ತಾಹ ಮಳಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ.

ಪದ್ಮರೇಖಾ, ಕುಂಕುಂ ಸಾಲಿ-2, ರಾಜಶ್ರೀ, ಸೀತಾ ಮೋಗ್, ಕೃಷ್ಣ, ಮಣಿಪುರಿ, ಕೆಂಪುದಡಿ, ಮುಟ್ಟು, ಮೈಸೂರು ಮಲ್ಲಿಗೆ, ಕಲ್ಚರ್, ಹಣಸು, ಕರಿ ಭತ್ತ ಸೇರಿದಂತೆ ಭಾರತದ ದೇಶಿಯ 200 ಭತ್ತದ ತಳಿಗಳು ಮಾತ್ರವಲ್ಲದೆ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ದಲ್ಲಿಯೇ ಸಂಶೋಧಿಸಲಾದ 15 ತಳಿಗಳು ಕೂಡ ಇಲ್ಲಿವೆ.

ಕೇಂದ್ರದಲ್ಲಿ ಈ ಬಾರಿ ಮತ್ತೆ ಹೊಸ ಮೂರು ಭತ್ತದ ತಳಿಗಳನ್ನು ಸಂಶೋಧಿಸ ಲಾಗಿದ್ದು, ಬಿಎಂಆರ್‌ಯುಎಸ್, ಇರ್ಗಾ 318, ಪ್ರತಿಕ್ಷಾ ಕೆಂಪಕ್ಕಿಯನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ. ಈ ಭತ್ತದ ತಳಿಗಳ ಕುರಿತು ಕೇಂದ್ರದ ವಿಜ್ಞಾನಿ(ತಳಿ ಶಾಸ್ತ್ರ) ಡಾ.ಶ್ರೀದೇವಿ ಜಕ್ಕೆರಾಳ್ ಕೃಷಿಕರಿಗೆ ಮಾಹಿತಿ ನೀಡುತ್ತಿದ್ದಾರೆ.

ಸೀತಾಫಲ, ಡ್ರಾಗನ್ ಫ್ರೂಟ್, ಬೆಣ್ಣೆ ಹಣ್ಣು, ಬೇರ್ ಹಣ್ಣು(ಬುಗರಿ ಹಣ್ಣು), ಫ್ಯಾಶನ್ ಫ್ರುಟ್, ಚಕೋತ, ಮಾದಲ ಫಲ ಎಂಬ ವಿವಿಧ ಜಾತಿಯ ಹಣ್ಣುಗಳು, ಸ್ಥಳೀಯ ತಳಿ ಸುವರ್ಣ ಗೆಡ್ಡೆ, ಗಜ ಲಿಂಬೆ, ಬೇಳೆ ಗೆಣಸು, ಸಾಂಬ್ರಾಣಿ, ಶ್ರೀಕುಂಬಳ, ಸೋರೆ ಕಾಯಿ, ಸೌತೆ ಕಾಯಿ, ಚೀನಿ ಕಾಯಿ, ಹಾಲು ಬೆಂಡೆ, ಕೆಂಪು ಬೆಂಡೆ, ಮಟ್ಟು ಗುಳ್ಳ, ಸಾಂಬಾರು ಸೌತೆ, ಪಡುವಲ ಕಾಯಿ, ಮರ ಕುಂಬಳ, ವಾಂಟೆ ಹುಳಿ ಸೇರಿದಂತೆ ವಿವಿಧ ಸ್ಥಳೀಯ ತರಕಾರಿ ತಳಿಗಳು ಮತ್ತು ಕೆಂಪು ಕ್ಯಾಬೆಜ, ಟೋಮೆಟೋ ರೆಡ್ ಪರ್ಲ್, ಮೆಣಸಿ ಕಾಯಿ ಸಹಿತ ಹತ್ತಾರು ವಿೇಶಿ ತಳಿಗಳು ಆಕರ್ಷಕವಾಗಿದ್ದವು.

ಕೃಷಿಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ರೀತಿಯ ಕೃಷಿ ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಹೈಡ್ರೋಫೋನಿಕ್ಸ್ ವಿಧಾನ ದಲ್ಲಿ ಮೇವಿನ ಬೆಳೆ ಉತ್ಪಾದನೆ, ಭತ್ತದಲ್ಲಿ ಚಾಪೆ ನೇಜಿ ತಯಾರಿ ಮತ್ತು ಶ್ರೀಪದ್ಧತಿ ಬೇಸಾಯ, ಸಿಓ-4 ಮೇವಿನ ಹುಲ್ಲಿನ ಪ್ರಾತ್ಯಕ್ಷಿಕೆ, ತೆಂಗಿನಲ್ಲಿ ಬಹು ಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, ಗೇರು ಕಸಿ ಕಟ್ಟುವಿಕೆ ಮತ್ತು ತೋಟದಲ್ಲಿ ನೀರು ಹಾಗೂ ಮಣ್ಣು ಸಂರಕ್ಷಣೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ ಮತ್ತು ಅಜೋಲ್ಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷ್ಷಿಕೆ ನೀಡಲಾಯಿತು.

ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ, ಹಂದಿ ಮತ್ತು ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ಮೌಲ್ಯಾಧಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಅಲಂಕಾರಿಕ ಗಿಡಗಳ ಪ್ರದರ್ಶನ ಮತ್ತು ಮಾರಾಟ ಆಕರ್ಷಣೀಯವಾಗಿತ್ತು.

ಗಮನ ಸೆಳೆದ ‘ಸುಲ್ತಾನ್’!

ಬ್ರಹ್ಮಾವರ ಉಪ್ಪಿನಕೋಟೆಯ ಮುಹಮ್ಮದ್ ಇರ್ಷಾದ್ ಅಬಿದಿನ್ ಮನೆ ಯಲ್ಲಿ ಸಾಕುತ್ತಿರುವ ಆಂಧ್ರಪ್ರದೇಶದ ಓಂಗೋಲ್ ಗೋತಳಿಯ ‘ಸುಲ್ತಾನ್’ ಎತ್ತು ಕೃಷಿಮೇಳದಲ್ಲಿ ಎಲ್ಲರ ಗಮನ ಸೆಳೆಯಿತು.

ಕಳೆದ ಹಲವು ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿರುವ ಇವರಲ್ಲಿ 20 ದೇಶಿಯ ಗೋ ತಳಿಗಳಿವೆ. ಇದರಲ್ಲಿ ಸುಲ್ತಾನ್ ಸಾಕಷ್ಟು ಆಕರ್ಷಣೀಯ ವಾಗಿದೆ. 72 ತಿಂಗಳ ಸುಲ್ತಾನ್ ಸುಮಾರು 6.2 ಎತ್ತರ ಇದೆ. ಅಲ್ಲದೆ ಇವ ರಲ್ಲಿ 12 ಗುಜರಾತ್‌ನ ಗೀರು ತಳಿ ಕೂಡ ಇವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News