ಏಕತೆಯ ಪ್ರತಿಮೆಗೆ 2900 ಕೋ.ರೂ. ಖರ್ಚು ಮಾಡಿದ ಸರಕಾರ ನಮಗೆ ನೀರನ್ನೂ ನೀಡಿಲ್ಲ: ಸ್ಥಳೀಯ ರೈತರ ಆಕ್ರೋಶ
ವಿಶ್ವದ ಅತಿ ಎತ್ತರದ 2900 ಕೋ.ರೂ. ವೆಚ್ಚದ ಸರ್ದಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿ ಭಾರತದಲ್ಲಿ ಅಕ್ಟೋಬರ್ 31ರಂದು ಅನಾವರಣಗೊಳ್ಳಲಿದೆ. ಸರ್ಕಾರ ಇದಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡಿದೆ. ಆದರೆ ಇಲ್ಲಿ ಸ್ಥಳೀಯ ರೈತರಿಗೆ ಸರಕಾರದ ಕೆಲಸದ ಬಗ್ಗೆ ತೀವ್ರ ಅಸಮಾಧಾನವಿದೆ ಎಂದು bbc.com ವರದಿ ಮಾಡಿದೆ. ಬಿಬಿಸಿಯ ವರದಿ ಈ ಕೆಳಗಿದೆ.
ಅಕ್ಟೋಬರ್ 31ರಂದು ಭಾರತದಲ್ಲಿ ಅನಾವರಣಗೊಳ್ಳಲಿರುವ ವಿಶ್ವದ ಅತೀ ದೊಡ್ಡ ಪ್ರತಿಮೆಗೆ ಸರಕಾರ ಕೋಟ್ಯಂತರ ಡಾಲರ್ ಖರ್ಚು ಮಾಡಿದೆ. ಆದರೆ ನಮಗಾಗಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಜರಾತಿ ಬಿಬಿಸಿಯ ರಾಕ್ಸಿ ಗಾಗ್ಡೇಕರ್ ಸ್ಥಳೀಯ ರೈತರನ್ನು ಈ ಬಗ್ಗೆ ಮಾತನಾಡಿಸಿದ್ದು, ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲೂ ಪರದಾಡುತ್ತಿರುವ ಪರಿಸ್ಥಿತಿಯಲ್ಲಿ ಇಷ್ಟೊಂದು ಕೋಟಿ ಮೊತ್ತವನ್ನು ಈ ಪುತ್ಥಳಿಗೆ ವೆಚ್ಚ ಮಾಡಿರುವುದು ಅತೀವ ಆಘಾತ ತಂದಿದೆ ಎಂದು ರೈತರು ಹೇಳಿದ್ದಾರೆ.
ಗುಜರಾತ್‍ನ ರೈತ ವಿಜೇಂದ್ರ ತಾಡ್ವಿ ತಮ್ಮ ಮೂರು ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನೀರಿಗಾಗಿ ಪರದಾಡುತ್ತಿದ್ದಾರೆ. ಇವರು ಮೆಣಸು, ಮೆಕ್ಕೆಜೋಳ ಮತ್ತು ಶೇಂಗಾ ಬೆಳೆಯುತ್ತಾರೆ. ದೇಶಾದ್ಯಂತ ಲಕ್ಷಾಂತರ ರೈತರು ತಮ್ಮ ಬೆಳೆಗಳಿಗೆ ಇಂದಿಗೂ ಮುಂಗಾರು ಮಳೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದಲ್ಲದಿದ್ದರೆ ಅಂತರ್ಜಲವನ್ನು ಪಂಪ್ ಮೂಲಕ ಮೇಲಕ್ಕೆತ್ತಿ ಬೆಳೆಗಳಿಗೆ ಹಾಯಿಸಬೇಕು. ಇದು ಶೇಕಡ 80ರಷ್ಟು ಗ್ರಾಮೀಣ ನೀರು ಪೂರೈಕೆ ಮತ್ತು ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಆದರೆ ಸುದೀರ್ಘ ಕಡುಬೇಸಿಗೆ ಮತ್ತು ಯದ್ವಾತದ್ವ ಮಳೆಯಿಂದ ಪದೇ ಪದೇ ಬರ ಪರಿಸ್ಥಿತಿ ಎದುರಾಗುತ್ತಿದೆ. ಇದು ತಾಡ್ವಿಯಂತಹ ಲಕ್ಷಾಂತರ ರೈತರ ಆದಾಯ ಕುಸಿತಕ್ಕೆ ಕಾರಣವಾಗಿದೆ.
ಆದ್ದರಿಂದ 2015ರಲ್ಲಿ ತಾಡ್ವಿ, ತನ್ನ ಆದಾಯಕ್ಕೆ ಪೂರಕವಾಗಿ ಒಂದಿಷ್ಟು ಹಣ ಗಳಿಸುವ ದೃಷ್ಟಿಯಿಂದ ಪ್ರತಿಮೆ ನಿರ್ಮಾಣ ಸ್ಥಳದಲ್ಲಿ ಚಾಲಕನಾಗಿ ಉದ್ಯೋಗಕ್ಕೆ ಸೇರಿಕೊಂಡರು. ಗುಜರಾತ್ ರಾಜ್ಯ ಸರ್ಕಾರ 182 ಮೀಟರ್ (600 ಅಡಿ) ಎತ್ತರದ ಪುತ್ಥಳಿಯನ್ನು ನಿರ್ಮಿಸುತ್ತಿದ್ದು, ಇದು ವಿಶ್ವದ ಅತಿ ಎತ್ತರದ ಪುತ್ಥಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
"ಇಂಥ ದೈತ್ಯ ಪ್ರತಿಮೆಗೆ ವೆಚ್ಚ ಮಾಡುವ ಬದಲು, ಈ ಹಣವನ್ನು ಸರ್ಕಾರ ಜಿಲ್ಲೆಯ ರೈತರಿಗಾಗಿ ವೆಚ್ಚ ಮಾಡಬಹುದಿತ್ತು" ಎನ್ನುವುದು ತಾಡ್ವಿಯವರ ವಾದ. ಈ ಭಾಗದ ರೈತರಿಗೆ ಇನ್ನೂ ನೀರಾವರಿಯ ಮೂಲಸೌಕರ್ಯಗಳೂ ಇಲ್ಲ ಎಂದು ಅವರು ವಿಷಾದಿಸುತ್ತಾರೆ. ಇದೀಗ ಪ್ರತಿಮೆ ನಿರ್ಮಾಣ ಕಾರ್ಯ ಮುಗಿದಿದ್ದು, ತಾಡ್ವಿಗೆ ಉದ್ಯೋಗ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಕೂಡಾ ಗುಜರಾತ್ ನವರಾಗಿದ್ದು, 2010ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಮೋದಿಯವರ ಆಡಳಿತಾರೂಢ ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಟೇಲ್ ಅವರನ್ನು ತಮ್ಮವರನ್ನಾಗಿ ಮಾಡಿಕೊಂಡು, ಅವರ ಪರಂಪರೆಯ ಹಕ್ಕುಸ್ಥಾಪನೆಯ ಪ್ರಯತ್ನ ನಡೆಸುತ್ತಿದೆ. ನೆಹರೂ ವಂಶಸ್ಥರಿಗೆ ಲಾಭ ಮಾಡಿಕೊಡುವ ಸಲುವಾಗಿ ಕಾಂಗ್ರೆಸ್ ಪಕ್ಷ ಪಟೇಲ್ ರನ್ನು ಮೂಲೆಗುಂಪು ಮಾಡಿತ್ತು ಎಂದು ಬಿಜೆಪಿ ಆಪಾದಿಸುತ್ತಿದೆ. ನೆಹರೂ ವಂಶದ ಮೂವರು ಪ್ರಧಾನಿಯಾಗಿದ್ದಾರೆ. ಸ್ವತಂತ್ರ ಭಾರತದ 71 ವರ್ಷಗಳ ಪೈಕಿ ಭಾರತದಲ್ಲಿ 49 ವರ್ಷ ಕಾಲ ಕಾಂಗ್ರೆಸ್ ಆಡಳಿತವಿತ್ತು.
ಪಟೇಲ್ ಸ್ಮಾರಕ ಯೋಜನೆಯಲ್ಲಿ ಒಂದು ತ್ರಿ-ಸ್ಟಾರ್ ಹೋಟೆಲ್, ಒಂದು ಮ್ಯೂಸಿಯಂ ಹಾಗೂ ಪಟೇಲ್ ಅವರ ಹೃದಯಕ್ಕೆ ತೀರಾ ಹತ್ತಿರವಿದ್ದ "ಉತ್ತಮ ಆಡಳಿತ" ಹಾಗೂ "ಕೃಷಿ ಅಭಿವೃದ್ಧಿ" ಕುರಿತ ವಿಷಯಗಳ ಸಂಶೋಧನಾ ಕೇಂದ್ರ ಕೂಡಾ ಸೇರಿದೆ.
ಇವೆಲ್ಲ ತಾಡ್ವಿ ಗ್ರಾಮ ನಾನಾ ಪಿಪಾಲಿಯಾದಿಂದ 10 ಕಿಲೋಮೀಟರ್ ದೂರದಲ್ಲಿವೆ. ಬುಡಕಟ್ಟು, ಬಡ ಹಾಗೂ ಗ್ರಾಮೀಣ ಜನರಿಂದ ಕೂಡಿದ ನರ್ಮದಾ ಜಿಲ್ಲೆಯಲ್ಲಿ ಇದು ತಲೆ ಎತ್ತಿದೆ. ಈ ಗ್ರಾಮದ ಹಲವು ಕುಟುಂಬಗಳು ಇಂದಿಗೂ ಹಸಿವಿನಿಂದ ಕಂಗೆಟ್ಟಿವೆ. ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ನೋಂದಣಿ ಕುಸಿಯುತ್ತಿದ್ದು, ಅಪೌಷ್ಟಿಕತೆ ತಾಂಡವವಾಡುತ್ತಿದೆ ಎಂದು 2016ರಲ್ಲಿ ಪ್ರಕಟವಾದ ರಾಜ್ಯ ಸರ್ಕಾರದ ವರದಿಯಿಂದ ತಿಳಿದುಬರುತ್ತದೆ.
ಆದರೆ ಇಲ್ಲಿಗೆ ವಾರ್ಷಿಕ ಸುಮಾರು 25 ಲಕ್ಷ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವುದರಿಂದ ಈ ಪುತ್ಥಳಿ ಜಿಲ್ಲೆಯ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ಸರ್ಕಾರದ್ದು. "ಇದು ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಕಾರಣವಾಗುತ್ತದೆ ಮತ್ತು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ" ಎಂದು ಯೋಜನೆಯ ಕಾಮಗಾರಿಗೆ ನಿಯೋಜಿಸಲ್ಪಟ್ಟ ಅಧಿಕಾರಿ ಸಂದೀಪ್ ಕುಮಾರ್ ಹೇಳುತ್ತಾರೆ.
ಆದರೆ ಜನತೆಗೆ ಈ ಬಗ್ಗೆ ಸಂದೇಹವಿದೆ. "ನಾವು ಸರ್ಕಾರಕ್ಕೆ ಒಂದು ಪ್ರಶ್ನೆ ಕೇಳಲು ಬಯಸುತ್ತೇವೆ: ರೈತರಿಗೆ ನೆರವಾಗುವ ಒಂದು ಯೋಜನೆಗೆ ಮತ್ತು ಜೀವನಮಟ್ಟ ಸುಧಾರಣೆಗೆ ಏಕೆ ಅದು ಅನುದಾನ ನೀಡಿಲ್ಲ?" ಎಂದು ಬುಡಕಟ್ಟು ಹಕ್ಕುಗಳ ಹೋರಾಟಗಾರ ಲಖನ್ ಪ್ರಶ್ನಿಸುತ್ತಾರೆ. "ನಮ್ಮ ಹೊಲಗಳಿಗೆ ನೀರಾವರಿಗಾಗಿ ನೀರಿನ ಸೌಲಭ್ಯ ಕಲ್ಪಿಸುವ ಆಶ್ವಾಸನೆ ನೀಡಿದ್ದರು. ಆದರೆ ಇಂದಿಗೂ ಪರಿಸ್ಥಿತಿ ಹಾಗೆಯೇ ಇದೆ"
ನಾನಾ ಪಿಪಾಲಿಯಾ ಗ್ರಾಮದ ಪಕ್ಕದ ನರ್ಮದಾ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶ. ನಿಯೋಜಿತ ನೀರಾವರಿ ಯೋಜನೆಗಳಿಗಾಗಿ ಇಲ್ಲಿಗೆ ನೀರು ಸಿಗಬೇಕಿತ್ತು. ಆದರೆ ತಾಡ್ವಿ ಹೇಳುವಂತೆ, ಅವರಿಗೆ ಹಾಗೂ ಗ್ರಾಮದ ಇತರರಿಗೆ ನೀರು ಇನ್ನೂ ಮರೀಚಿಕೆ. "ನಾನು ವರ್ಷಕ್ಕೆ ಒಂದು ಬೆಳೆ ಮಾತ್ರ ಬೆಳೆಯುತ್ತೇನೆ. ಆದರೆ ನೀರಾವರಿ ಸೌಲಭ್ಯ ಇರುವ ರೈತರು ವರ್ಷಕ್ಕೆ ಮೂರು ಬೆಳೆಯನ್ನೂ ಬೆಳೆಯುತ್ತಾರೆ" ಎಂದು ಮಳೆನೀರನ್ನೇ ಆಶ್ರಯಿಸಿರುವ ರೈತ ಭೋಲಾ ತಾಡ್ವಿ ಹೇಳುತ್ತಾರೆ.
2011ರ ಜನಗಣತಿ ಪ್ರಕಾರ, ಜಿಲ್ಲೆಯ ಶೇಕಡ 85ರಷ್ಟು ದುಡಿಯುವ ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಎರಡರಿಂದ ನಾಲ್ಕು ಎಕರೆ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚು.
ಈ ಗ್ರಾಮಸ್ಥರಿಗೆ ನೀರು ಒದಗಿಸಲು ಸರ್ಕಾರ ಬದ್ಧ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ಗುಜರಾತಿ ಬಿಬಿಸಿಗೆ ತಿಳಿಸಿದರು, ಆದರೆ ನೀರು ಪಡೆಯಲು ಸ್ಥಳೀಯ ರೈತರು ಹರಸಾಹಸ ಮಾಡುತ್ತಿದ್ದಾರೆ ಎನ್ನುವುದು ಲಖನ್ ಅವರ ಹೇಳಿಕೆ. ಭಾರತದ ಅರ್ಧದಷ್ಟು ಮಂದಿಗೆ ಕೃಷಿಯೇ ಜೀವನಾಧಾರ. ಕೃಷಿ ಕ್ಷೇತ್ರ ದೇಶದ ಜಿಡಿಪಿಗೆ ಶೇಕಡ 15ರಷ್ಟು ಕೊಡುಗೆ ನೀಡುತ್ತದೆ. ಭಾರತದಲ್ಲಿ ಕೃಷಿ ಪ್ರಗತಿ ಶೇಕಡ 1.2ಕ್ಕೆ ಕುಸಿದಿದೆ. ಕೃಷಿ ಕ್ಷೇತ್ರ ಹಲವು ಮಂದಿಗೆ ಉದ್ಯೋಗ ಕಲ್ಪಿಸಿದ್ದರೂ, ಬೆಳೆಯುವ ಉತ್ಪನ್ನ ಮಾತ್ರ ಅತ್ಯಲ್ಪ. ಲಕ್ಷಾಂತರ ರೈತರು ಬ್ಯಾಂಕ್ ಹಾಗೂ ಲೇವಾದೇವಿದಾರರಿಂದ ಪಡೆದ ಕೃಷಿ ಸಾಲ ಪಾವತಿಸಲು ಹೆಣಗುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ, ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಸಾಲ ಮನ್ನಾ ಮತ್ತು ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. 2017ರಲ್ಲಿ ಬರಪೀಡಿತ ತಮಿಳುನಾಡು ರಾಜ್ಯದ ರೈತರು, ತಮ್ಮ ಪರಿಸ್ಥಿತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮಾನವ ಬುರುಡೆಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಜೀವಂತ ಇಲಿಯನ್ನು ಕಚ್ಚಿ ತಿನ್ನುವ ಮೂಲಕ ತಮ್ಮ ಆಕ್ರೋಶ ಮತ್ತು ಅಸಹಾಯಕತೆಯನ್ನು ಪ್ರದರ್ಶಿಸಿದ್ದರು.
ಇದೀಗ ಪಟೇಲ್ ಪುತ್ಥಳಿಯ ನೆರಳಲ್ಲಿ, ರೈತರು ನೀರು ಕದಿಯುವುದು ಮುಂದುವರಿಸಿದ್ದಾರೆ. ಏಕೆಂದರೆ ಅವರ ಹೊಲದ ಎದುರೇ, ಅಣೆಕಟ್ಟಿನ ನೀರು ನಾಲೆಗಳ ಮೂಲಕ ಹರಿಯುತ್ತದೆ. ಆದರೆ ಉಪಕಾಲುವೆ ಮಾಡಿಕೊಂಡು ಅದನ್ನು ತಮ್ಮ ಹೊಲಗಳಿಗೆ ಹರಿಸಿಕೊಳ್ಳುವುದು ಕಾನೂನುಬಾಹಿರವಾಗುತ್ತದೆ. ಆದ್ದರಿಂದ ಕದಿಯುವುದು ಅನಿವಾರ್ಯ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.
ನೀರು ಹರಿಯುವ ನಾಲೆಯಿಂದ ಭೂಗತ ಪೈಪ್ ಮೂಲಕ ನನ್ನ ಹೊಲಕ್ಕೆ ನೀರು ಹರಿಸುತ್ತಿದ್ದೇನೆ ಎಂದು ರೈತರೊಬ್ಬರು ಹೇಳಿದರು. ಬಹುತೇಕ ಎಲ್ಲ ರೈತರೂ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹೀಗೆ ಮಾಡುತ್ತಾರೆ ಎಂದು ಅವರು ವಿವರಿಸುತ್ತಾರೆ.
"ನಮಗೆ ಯಾವುದೇ ಜಲಮೂಲ ಇಲ್ಲದಿರುವ ಹಿನ್ನೆಲೆಯಲ್ಲಿ ನೀರು ಕದಿಯುವುದು ಬಿಟ್ಟರೆ ನಮಗೆ ಬೇರೆ ಯಾವ ಆಯ್ಕೆಯೂ ಇಲ್ಲ" ಎಂದು ಮತ್ತೋರ್ವ ರೈತ ಹೇಳುತ್ತಾರೆ.