ಸೌಲಭ್ಯ ವಂಚಿತ ಬಿಜೂರು ಗ್ರಾಮದ ಮತದಾರರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

Update: 2018-10-29 14:52 GMT

ಬೈಂದೂರು, ಅ.29: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೂರು ಗ್ರಾಪಂನ ಬಿಜೂರು ಶೆಟ್ರಕೆರೆ ನಾಲ್ಕನೆ ವಾರ್ಡ್‌ನ ಮತದಾರರು ಗ್ರಾಮಕ್ಕೆ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಈ ಬಾರಿಯ ಉಪಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

‘ಪ್ರಗತಿ ಹೊಂದದ ನಮ್ಮೂರು...ರಾಜಕಾರಣಿಗಳ ನಿರ್ಲಕ್ಷ...ಗ್ರಾಮಸ್ಥರ ಆಕ್ರೋಶ..ಚುನಾವಣೆಗೆ ದಿಕ್ಕಾರ!’, ‘ಹಲವು ವರ್ಷಗಳ ಪ್ರಯೋಜನ ಇಲ್ಲದ ಹೋರಾಟ...ಕಣ್ಣೆತ್ತಿ ನೋಡದ ರಾಜಕಾರಣಿಗಳು! ಚುನಾವಣೆಗೆ ವಿರೋಧ’ ಹಾಗೂ ‘ಅಭಿವೃದ್ಧಿ ಕಾಣದ ಊರು...ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ’ ಎಂಬಿತ್ಯಾದಿ ಬಿತ್ತಿಪತ್ರಗಳು ಬಿಜೂರು ಶೆಟ್ರಕೆರೆ ಗ್ರಾಮದ ಬೀದಿಬೀದಿಗಳಲ್ಲಿ ಕಂಡುಬರುತ್ತಿವೆ.

ಈ ಪ್ರದೇಶದಲ್ಲಿ ಸುಮಾರು 150 ಕುಟುಂಬಗಳಿದ್ದು, 900 ಮತದಾರರಿದ್ದಾರೆ. ಹಲವು ವರ್ಷಗಳಿಂದ ಈ ವಾರ್ಡ್‌ಗೆ ಅನುದಾನವೇ ನೀಡಿಲ್ಲ. ಕಳೆದ ಬಾರಿ ಸಂಸದರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವರೆಗೆ ಇಲ್ಲಿಗೆ ಭೇಟಿ ನೀಡಿಲ್ಲ. ಇದರ ಪರಿಣಾಮ 20ವರ್ಷಗಳಷ್ಟು ಹಳೆಯ ರಸ್ತೆ ಈಗಲೂ ಅದೇ ಸ್ಥಿತಿಯಲ್ಲಿದ್ದು, ನಡೆಯಲು ಕೂಡ ಅಸಾಧ್ಯವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಅಪಾಯದಲ್ಲಿ ಪುಟಾಣಿಗಳು: ಈ ವಾರ್ಡ್‌ನಲ್ಲಿರುವ ಅಂಗನವಾಡಿ ಸಮೀಪದಲ್ಲೇ ನೀರಿನ ಟ್ಯಾಂಕೊಂದು ಇದ್ದು, ಬಿರುಕು ಬಿಟ್ಟ ಈ ಟ್ಯಾಂಕ್‌ನ್ನು ದುರಸ್ತಿ ಮಾಡುವಂತೆ ಹಲವು ವರ್ಷಗಳಿಂದ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಗ್ರಾಪಂ ಈವರೆಗೆ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ.

ಅಪಾಯಕಾರಿ ಸ್ಥಿತಿಯಲ್ಲಿರುವ ನೀರಿನ ಟ್ಯಾಂಕಿನ ಕೆಳಗೆ ಅಂಗನವಾಡಿ ಮತ್ತು ಒಂದು ಮನೆ ಇದೆ. ಅಂಗನವಾಡಿಯಲ್ಲಿ ಸುಮಾರು 30-40 ಮಕ್ಕಳಿದ್ದಾರೆ. ಆದುದರಿಂದ ತೀರಾ ಹಳೆಯದಾದ ಈ ಟ್ಯಾಂಕ್‌ನ್ನು ಕೂಡಲೇ ಹೊಸ ದಾಗಿ ನಿರ್ಮಿಸಬೇಕು ಎಂದು ಸ್ಥಳೀಯ ಆಗ್ರಹಿಸಿದ್ದಾರೆ. ಪ್ರತಿವರ್ಷ ಕೂಡ ಇಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಇಲ್ಲಿರುವ ಬಾವಿಯನ್ನು ದುರಸ್ತಿ ಮಾಡುವ ಬದಲು ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ರಸ್ತೆಗೆ ಎರಡು ಕಿ.ಮೀ. ದೂರದವರೆಗೆ ಯಾವುದೇ ದಾರಿದೀಪಗಳಿಲ್ಲ. ಸ್ಥಳೀಯರು ಕತ್ತಲೆಯಲ್ಲಿಯೇ ನಡೆಯುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲದ ಪರಿಣಾಮ ಗ್ರಾಮಸ್ಥರು ಪಡಿತರ ತರಲು ಸುಮಾರು ನಾಲ್ಕೈದು ಕಿ.ಮೀ. ನಡೆದುಕೊಂಡೇ ಹೋಗಬೇಕು. 200ರೂ. ರಿಕ್ಷಾ ಬಾಡಿಗೆ ನೀಡಿ ಪಡಿತರ ತರುವುದು ದುಬಾರಿ ಎನಿಸುತ್ತದೆ. ಆದುದರಿಂದ ಇದೇ ಗ್ರಾಮದಲ್ಲಿ ಪಡಿತರ ಅಂಗಡಿಯನ್ನು ತೆರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ವಾರ್ಡ್‌ನ ಜನತೆ ಈ ಬಾರಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಪ್ರತಿಬಾರಿ ಚುನಾವಣೆ ಬಂದಾಗ ಆಶ್ವಾಸನೆ ನೀಡಿ ಹೋಗುವ ರಾಜಕಾರಣಿಗಳು ನಂತರ ಇತ್ತ ತಲೆ ಹಾಕಲ್ಲ. ಇದರಿಂದ ಬೇಸತ್ತು ಈ ಬಾರಿ ಈ ತೀರ್ಮಾನ ಮಾಡಲಾಗಿದೆ. ಅನುದಾನ ಇಲ್ಲದೆ ಈ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿದೆ. ಜನರ ಎಲ್ಲದಕ್ಕೂ ತೊಂದರೆ ಅನುಭವಿಸುವ ಸ್ಥಿತಿ ಇಲ್ಲಿದೆ.
-ಜಯರಾಮ ಶೆಟ್ಟಿ, ಮಾಜಿ ಅಧ್ಯಕ್ಷರು, ಬಿಜೂರು ಗ್ರಾಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News