ಟ್ವೆಂಟಿ-20 ಸರಣಿ: ಆಸೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಪಾಕ್

Update: 2018-10-30 04:10 GMT

ದುಬೈ, ಅ.29: ಆರಂಭಿಕ ಆಟಗಾರ ಬಾಬರ್ ಆಝಮ್ ಅವರ ಅರ್ಧಶತಕ ಕೊಡುಗೆ ಹಾಗೂ ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಕಬಳಿಸಿದ ಮೂರು ವಿಕೆಟ್ ಸಹಾಯದಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ಮೂರನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 33 ರನ್‌ಗಳಿಂದ ಜಯಿಸಿದೆ. ಈ ಗೆಲುವಿನ ಮೂಲಕ ಪಾಕ್ ತಂಡ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.

ರವಿವಾರ ನಡೆದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆಝಮ್ ಅರ್ಧಶತಕ(50,40 ಎಸೆತ, 5 ಬೌಂಡರಿ, 1 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿತು.

ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದ ಆಸ್ಟ್ರೇಲಿಯ 19.1 ಓವರ್‌ಗಳಲ್ಲಿ 117 ರನ್‌ಗೆ ಆಲೌಟಾಯಿತು. ಶಾದಾಬ್ ಖಾನ್ 19 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿ ಆಸೀಸ್‌ನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಲು ನೆರವಾದರು.

 ಸರಣಿಯಲ್ಲಿ ಸತತ ಮೂರನೇ ಜಯ ದಾಖಲಿಸಿದ ಪಾಕ್ ವಿಶ್ವದ ನಂ.1 ರ್ಯಾಂಕಿಂಗ್‌ನ್ನು ಸಮರ್ಥಿಸಿಕೊಂಡಿತು. ಪಾಕ್ ಅಬುಧಾಬಿಯಲ್ಲಿ 66 ರನ್ ಹಾಗೂ ದುಬೈನಲ್ಲಿ 11 ರನ್‌ಗಳ ಜಯ ದಾಖಲಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 89 ರನ್‌ಗೆ ಆಲೌಟಾಗಿದ್ದ ಆಸ್ಟ್ರೇಲಿಯ ಆ ಆಘಾತದಿಂದ ಮತ್ತೆ ಚೇತರಿಸಿಕೊಳ್ಳಲಿಲ್ಲ. ರವಿವಾರದ ಪಂದ್ಯದಲ್ಲಿ ಮಿಚೆಲ್ ಮಾರ್ಷ್(21), ಬೆನ್ ಮೆಕ್‌ಡೆರ್ಮಾಟ್(21) ಹಾಗೂ ಅಲೆಕ್ಸ್ ಕಾರೆ(20) ಎರಡಂಕೆಯ ಸ್ಕೋರ್ ದಾಖಲಿಸಿದರು. ಇನಿಂಗ್ಸ್ ಆರಂಭಿಸಿದ ಅಲೆಕ್ಸ್ ಕಾರೆ ಅವರು ಇಮಾದ್ ವಸೀಂ ಅವರ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಆದರೆ, ಆಸ್ಟ್ರೇಲಿಯ ಆ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು.

 ಕೇವಲ ಒಂದು ರನ್ ಗಳಿಸಿದ ಆ್ಯರೊನ್ ಫಿಂಚ್ ಮತ್ತೊಮ್ಮೆ ವಿಫಲರಾದರು. ಕ್ರಿಸ್ ಲಿನ್(15) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(4)ರನ್ನು ವೇಗದ ಬೌಲರ್ ಹಸನ್ ಅಲಿ(14ಕ್ಕೆ2)ಪೆವಿಲಿಯನ್‌ಗೆ ಕಳುಹಿಸಿದರು. ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ಪಾಕ್ ಪರ ಆಝಮ್ ಸರಣಿಯಲ್ಲಿ ಎರಡನೇ ಬಾರಿ ಅರ್ಧಶತಕ ಸಿಡಿಸಿದರು. ಆಝಮ್ ಹಾಗೂ ಸಾಹಿಬ್‌ಝದಾ ಫರ್ಹನ್(39,38 ಎಸೆತ) ಮೊದಲ ವಿಕೆಟ್‌ಗೆ 99 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಇದು ಆಸೀಸ್ ವಿರುದ್ಧ ಟಿ-20 ಪಂದ್ಯದಲ್ಲಿ ಪಾಕ್ ಮೊದಲ ವಿಕೆಟ್‌ಗೆ ಗಳಿಸಿದ ಗರಿಷ್ಠ ಜೊತೆಯಾಟವಾಗಿದೆ. ಪಾಕ್ ಉತ್ತಮ ಆರಂಭದ ಲಾಭ ಪಡೆಯಲು ವಿಫಲವಾಯಿತು.

18 ರನ್ ಗಳಿಸಿದ ಆಲ್‌ರೌಂಡರ್ ಶುಐಬ್ ಮಲಿಕ್ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಚರಿತ್ರೆಯಲ್ಲಿ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 105 ಪಂದ್ಯಗಳಲ್ಲಿ 2,153 ರನ್ ಗಳಿಸಿದ ಮಲಿಕ್ ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್ ದಾಖಲೆ ಮುರಿದರು. ನ್ಯೂಝಿಲೆಂಡ್‌ನ ಇನ್ನೋರ್ವ ದಾಂಡಿಗ ಮಾರ್ಟಿನ್ ಗಪ್ಟಿಲ್ ಟಿ-20ಯಲ್ಲಿ ಗರಿಷ್ಠ ರನ್ ಗಳಿಸಿದ್ದಾರೆ. ಅವರು 75 ಪಂದ್ಯಗಳಲ್ಲಿ 2,271 ರನ್ ಗಳಿಸಿದ್ದಾರೆ. ಪಾಕಿಸ್ತಾನ ತಂಡ ನ್ಯೂಝಿಲೆಂಡ್ ವಿರುದ್ಧ ಬುಧವಾರ ಅಬುಧಾಬಿಯಲ್ಲಿ 3 ಪಂದ್ಯಗಳ ಟ್ವೆಂಟಿ-20 ಸರಣಿ ಆಡಲಿದೆ. ಆ ಬಳಿಕ 3 ಪಂದ್ಯಗಳ ಏಕದಿನ ಹಾಗೂ ಟೆಸ್ಟ್ ಸರಣಿಯನ್ನಾಡಲಿದೆ.

►ಸರಣಿಶ್ರೇಷ್ಠ: ಬಾಬರ್ ಆಝಮ್.

►ಪಂದ್ಯಶ್ರೇಷ್ಠ: ಶಾದಾಬ್ ಖಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News