ಒಮ್ಮತದಿಂದ ರಾಮ ಮಂದಿರ ನಿರ್ಮಾಣ ಅಸಾಧ್ಯವಾದರೆ ಇನ್ನೂ ಹಲವು ಮಾರ್ಗಗಳಿವೆ: ಆದಿತ್ಯನಾಥ್

Update: 2018-10-30 16:07 GMT

ಲಕ್ನೋ, ಅ.30: ರಾಮ ಮಂದಿರ ವಿವಾದ ಒಮ್ಮತದಿಂದ ಪರಿಹಾರವಾಗಬೇಕು. ಆದರೆ ಒಮ್ಮತ ಮೂಡದಿದ್ದರೆ ಇತರ ಹಲವು ಮಾರ್ಗಗಳೂ ಇವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ. ತ್ವರಿತ ತೀರ್ಮಾನದ ಮೂಲಕ ರಾಮ ಜನ್ಮಭೂಮಿ ವಿವಾದಕ್ಕೆ ಪರಿಹಾರ ಹುಡುಕಬೇಕಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ನಮ್ಮ ಮೇಲಿದ್ದು ಇದನ್ನು ನಾವು ನಿಭಾಯಿಸುತ್ತೇವೆ. ಎಲ್ಲರ ಒಮ್ಮತದಿಂದ ನಿರ್ಧಾರ ಕೈಗೊಂಡರೆ ಒಳ್ಳೆಯದು. ಇಲ್ಲದಿದ್ದರೆ ಇತರ ಹಲವು ಆಯ್ಕೆಗಳಿದ್ದು ಯಾವುದು ಸೂಕ್ತವೋ ಅದನ್ನು ನಾವು ಆಯ್ದುಕೊಳ್ಳುತ್ತೇವೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಆದರೆ ಜನತೆ ತಾಳ್ಮೆ ಕಳೆದುಕೊಳ್ಳಬಾರದು. ಸಮಸ್ಯೆಯನ್ನು ಶಾಂತಚಿತ್ತದಿಂದ ಎದುರಿಸಿದರೆ ಅದಕ್ಕೆ ಪರಿಹಾರ ಹುಡುಕಲು ಸಾಧ್ಯವಿದೆ.ಇದು ಪರಿವರ್ತನೆಯ ಹಂತವಾಗಿದ್ದು ಸಾಧು ಸಂತರು ವಿವಾದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಕಾರಾತ್ಮಕ ಪ್ರಯತ್ನ ನಡೆಸುತ್ತಾರೆಂದು ತಾನು ಆಶಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ಆದಿತ್ಯನಾಥ್ ಹೇಳಿಕೆಯನ್ನು ಟೀಕಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಪ್ರತೀ ಐದು ವರ್ಷಗಳಿಗೊಮ್ಮೆ ಚುನಾವಣೆ ಎದುರಾದಾಗ ಬಿಜೆಪಿ ಆಡುತ್ತಿರುವ ನಾಟಕ ಇದಾಗಿದೆ. ಈ ಪ್ರಕರಣ ಇದೀಗ ಸುಪ್ರೀಂಕೋರ್ಟ್‌ನ ಅಂಗಳದಲ್ಲಿರುವ ಕಾರಣ ನ್ಯಾಯಾಲಯದ ತೀರ್ಮಾನವನ್ನು ಕಾಯಬೇಕು ಎಂಬುದು ಕಾಂಗ್ರೆಸ್ ನಿಲುವಾಗಿದೆ. ತರಾತುರಿಯ ಕ್ರಮ ಸೂಕ್ತವಲ್ಲ ಎಂದು ಹೇಳಿದ್ದಾರೆ. ಮಂದಿರ ನಿರ್ಮಾಣದ ಬಗ್ಗೆ ಆಧ್ಯಾದೇಶ ಜಾರಿಗೊಳಿಸುವ ಕುರಿತು ಪ್ರತಿಕ್ರಿಯಿಸಿದ ಚಿದಂಬರಂ, ಆಧ್ಯಾದೇಶ ಜಾರಿಗೊಳಿಸುವುದು ಸಂಸತ್ತಲ್ಲ, ಸರಕಾರ. ಆಧ್ಯಾದೇಶದ ಬಗ್ಗೆ ಒತ್ತಾಯಿಸುವವರಿಗೆ ಪ್ರಧಾನಿ ಪ್ರತಿಕ್ರಿಯಿಸಬೇಕಿದೆ. ಆದರೆ ಪ್ರಧಾನಿ ಮೋದಿ ಯಾವುದೇ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದೇ ಇಲ್ಲವಲ್ಲ ಎಂದು ಟೀಕಿಸಿದರು.

ಈ ಮಧ್ಯೆ, ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದ ಪ್ರಕರಣವನ್ನು ಜನವರಿ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸೋಮವಾರ ಸುಪ್ರೀಂಕೋರ್ಟ್ ತಿಳಿಸಿದ ಬಳಿಕ, ಆಧ್ಯಾದೇಶವೊಂದನ್ನು ಜಾರಿಗೊಳಿಸಿ ಶೀಘ್ರ ರಾಮಮಂದಿರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೇಂದ್ರ ಸರಕಾರದ ಮೇಲೆ ಬಿಜೆಪಿ ಮುಖಂಡರು ಹಾಗೂ ಸಂಘ ಪರಿವಾರದ ಮುಖಂಡರ ಒತ್ತಡ ಹೆಚ್ಚಿದೆ. ವಿಜಯದಶಮಿಯಂದು ನಡೆದ ಆರೆಸ್ಸೆಸ್‌ನ ವಾರ್ಷಿಕ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಕೂಡಾ ಕಾನೂನು ಜಾರಿಗೊಳಿಸಲು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News