ದಕ್ಷಿಣ ರಾಜ್ಯಗಳು ಯಾವುದೇ ಸಮಯದಲ್ಲಿ 2 ಗಂಟೆ ಕಾಲ ಪಟಾಕಿ ಸಿಡಿಸಬಹುದು: ಸುಪ್ರೀಂ

Update: 2018-10-30 16:10 GMT

ಹೊಸದಿಲ್ಲಿ, ಅ. 30: ವಾಯು ಮಾಲಿನ್ಯ ತಡೆಗಟ್ಟಲು ದೀಪಾವಳಿ ಸಂದರ್ಭ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸುವಂತೆ ಕಳೆದ ವಾರ ನೀಡಿರುವ ಆದೇಶ ಬದಲಾಯಿಸಿರುವ ಸುಪ್ರೀಂ ಕೋರ್ಟ್, ದಕ್ಷಿಣದ ಎಲ್ಲ ರಾಜ್ಯಗಳು ದಿನದ ಯಾವುದೇ ಸಮಯದಲ್ಲಿ 2 ಗಂಟೆಗಳ ಕಾಲ ಪಟಾಕಿ ಸಿಡಿಸಬಹುದು ಎಂದು ಮಂಗಳವಾರ ಹೇಳಿದೆ. ತಮಿಳುನಾಡು ಸರಕಾರ ಹಾಗೂ ಪಟಾಕಿ ಉತ್ಪಾದಕರು ಸಲ್ಲಿಸಿದ ಹಲವು ಮನವಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು.

 ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಪಟಾಕಿ ಸಿಡಿಸಲು ಈಗಾಗಲೇ ನೀಡಿರುವ ಅನುಮತಿಯ ಹೊರತಾಗಿಯೂ ರಾಜ್ಯದಲ್ಲಿನ ಧಾರ್ಮಿಕ ಆಚರಣೆಗೆ ಅನುಗುಣವಾಗಿ ದೀಪಾವಳಿ ದಿನದ ಬೆಳಗ್ಗೆ ಪಟಾಕಿಗಳನ್ನು ಸಿಡಿಸಲು ಅನುಮತಿ ನೀಡಬೇಕು ಎಂದು ಕೋರಿ ತಮಿಳು ನಾಡು ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.

 ಬೆಳಗ್ಗೆ 4.30ರಿಂದ 7.30ರ ವರೆಗೆ ಎರಡು ಗಂಟೆಗಳ ಕಾಲ ಪಟಾಕಿ ಸಿಡಿಸಲು ಅನುಮತಿ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿತ್ತು. ತಮಿಳುನಾಡು ನವೆಂಬರ್ 6ರಂದು ದೀಪಾವಳಿ ಆಚರಿಸಲಿದೆ. ದಿಪಾವಳಿ ಆಚರಣೆಗೆ ಸಂಬಂಧಿಸಿ ಪ್ರತಿ ರಾಜ್ಯ ಅಥವಾ ಪ್ರತಿ ಪಂಗಡಕ್ಕೆ ಪ್ರತ್ಯೇಕ ನಂಬಿಕೆ ಹಾಗೂ ಸಂಪ್ರದಾಯ ಇದೆ. ಸುಪ್ರೀಂ ಕೋರ್ಟ್‌ನ ತೀರ್ಪು ಜನರ ಧಾರ್ಮಿಕ ಹಕ್ಕನ್ನು ನಿರಾಕರಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿತ್ತು. ಈ ದೀಪಾವಳಿ ಸಂದರ್ಭ ಪರಿಸರ ಸ್ನೇಹಿ ಪಟಾಕಿಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಪಟಾಕಿ ಉತ್ಪಾದಕರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News