ಪರಿಸರ ಸ್ನೇಹಿ ಪಟಾಕಿ ಈ ವರ್ಷದ ದೀಪಾವಳಿಗೆ ಅಲಭ್ಯ: ಕೇಂದ್ರ ಸಚಿವ
ಹೊಸದಿಲ್ಲಿ, ಅ. 30: ಕಡಿಮೆ ವಾಯು ಮಾಲಿನ್ಯದ ಪರಿಸರ ಸ್ನೇಹಿ ಪಟಾಕಿ ಉತ್ಪಾದಿಸಲಾಗುವುದು. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಕೈಗಾರಿಕೆಗಳೊಂದಿಗೆ ಶೀಘ್ರದಲ್ಲಿ ಹಂಚಿಕೊಳ್ಳಲಾಗುವುದು. ಆದರೆ, ಇದು ಈ ದೀಪಾವಳಿಗೆ ಲಭ್ಯವಾಗದು ಎಂದು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಸೋಮವಾರ ತಿಳಿಸಿದ್ದಾರೆ. ಕಡಿಮೆ ಹೊಗೆ ಸೂಸುವ ಪಟಾಕಿ ತಯಾರಿಸುವ ತಂತ್ರಜ್ಞಾನವನ್ನು ವೈಜ್ಞಾನಿಕ ಮಂಡಳಿ ಹಾಗೂ ಕೈಗಾರಿಕಾ ಸಂಶೋಧನೆ (ಕೌನ್ಸಿಲ್ ಆಫ್ ಸಯಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್-ಸಿಎಸ್‌ಐಆರ್)ಯ ರಾಷ್ಟ್ರೀಯ ಪಾರಿಸರಿಕ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನ್ಯಾಶನಲ್ ಎನ್ವಿರಾನ್‌ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್-ಎನ್‌ಇಇಆರ್‌ಐ) ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು. ಉತ್ಪಾದಿಸುವ ಪರಿಸರ ಸ್ನೇಹಿ ಪಟಾಕಿಗಳನ್ನು ಸುರಕ್ಷಾ ಪರಿಶೀಲನೆ ಹಾಗೂ ಉತ್ಪಾದಕರಿಗೆ ಪರವಾನಿಗೆ ನೀಡಲು ಪೆಟ್ರೋಲಿಯಂ ಹಾಗೂ ಸ್ಫೋಟಕ ಸುರಕ್ಷಾ ಸಂಘಟನೆ (ಪೆಟ್ರೋಲಿಯಂ ಆ್ಯಂಡ್ ಎಕ್ಸ್‌ಪ್ಲೋಸಿವ್ ಸೆಫ್ಟಿ ಆರ್ಗನೈಸೇಷನ್-ಪಿಇಎಸ್‌ಒ) ಗೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.
‘‘ಆದರೆ, ಇದು ಈ ದೀಪಾವಳಿಗೆ ಲಭ್ಯವಾಗದು. ಪಿಇಎಸ್‌ಒ ಒಮ್ಮೆ ಪರವಾನಿಗೆ ನೀಡಿದರೆ, ಶಿವಕಾಶಿಯಲ್ಲಿ ಇರುವಂತಹ ಫ್ಯಾಕ್ಟರಿಗಳು ಈ ಪಟಾಕಿಗಳನ್ನು ಉತ್ಪಾದಿಸಲು ಆರಂಭಿಸಲಿವೆ. ಈ ಪಟಾಕಿಗಳು ವರ್ಷಾದ್ಯಂತ ಬಳಕೆಗೆ ಲಭ್ಯವಾಗಲಿದೆ’’ ಎಂದು ಸಚಿವರು ತಿಳಿಸಿದ್ದಾರೆ. ದೀಪಾವಳಿ ಬಳಿಕ ದಿಲ್ಲಿಯ ಗಾಳಿಯಲ್ಲಿ ಅತಿ ಹೆಚ್ಚು ಬೇರಿಯಂ ಹಾಗೂ ಅಲ್ಯೂಮಿನಿಂಯ ವಿಷದ ಅಂಶಗಳು ಇರುವುದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸೆಂಟ್ರಲ್ ಪೊಲ್ಯುಶನ್ ಬೋರ್ಡ್-ಸಿಪಿಸಿಬಿ) 2016 ಹಾಗೂ 2017ರಲ್ಲಿ ಪತ್ತೆ ಹಚ್ಚಿತ್ತು. ನೂತನ ತಂತ್ರಜ್ಞಾನದ ಪರಿಸರ ಸ್ನೇಹಿ ಪಟಾಕಿಯಿಂದ ಮಾಲಿನ್ಯ ಪ್ರಮಾಣ ಶೇ. 20ರಿಂದ 30ರಷ್ಟು ಕಡಿಮೆ ಆಗಲಿದೆ ಎಂದು ಅವರು ಹರ್ಷ ವರ್ಧನ್ ತಿಳಿಸಿದ್ದಾರೆ.