×
Ad

ಶ್ರೀನಗರದ ಉದ್ಯಮಿಯ ನಿವಾಸಗಳಿಗೆ ಎನ್‌ಐಎ ದಾಳಿ

Update: 2018-10-30 22:56 IST

ಶ್ರೀನಗರ,ಅ.30: ದಶಕದ ಹಿಂದಿನ,ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎಯು ತಲೆಮರೆಸಿಕೊಂಡಿರುವ ಉದ್ಯಮಿ ಮತ್ತು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ನಾಸಿರ್ ಸಫಿ ಮಿರ್ ಮತ್ತು ಆತನ ಕುಟುಂಬಕ್ಕೆ ಸೇರಿದ ಇಲ್ಲಿಯ ಲಾಲ್ ಬಝಾರ್ ಪ್ರದೇಶದ ಮೂರು ನಿವಾಸಗಳ ಮೇಲೆ ಮಂಗಳವಾರ ದಾಳಿ ನಡೆಸಿದೆ.

ಮಿರ್(48) ಹುರಿಯತ್ ನಾಯಕರಿಗೆ ಆರ್ಥಿಕ ನೆರವು ಒದಗಿಸಿದ್ದ ಆರೋಪಿಯಾಗಿದ್ದು, ಜಾಮೀನು ಪಡೆದುಕೊಂಡ ಬಳಿಕ ಆತ ದೇಶದಿಂದ ಪರಾರಿಯಾಗಿದ್ದಾನೆ ಎಂದು ನಂಬಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಎನ್‌ಐಎ ಪ್ರಕರಣವನ್ನು ಮರುದಾಖಲಿಸಿಕೊಂಡ ಸುಮಾರು 10 ತಿಂಗಳುಗಳ ಬಳಿಕ ಈ ದಾಳಿಗಳು ನಡೆದಿವೆ.

ಮಿರ್ ಅಲಿಯಾಸ್ ಬಾಬುಲ್ ದಕ್ಷಿಣದ ರಾಜ್ಯವೊಂದರಿಂದ ಪಾಸ್‌ಪೋರ್ಟ್‌ನ್ನು ಹೇಗೆ ಪಡೆದುಕೊಂಡಿದ್ದ ಎನ್ನುವುದನ್ನು ತಿಳಿದುಕೊಳ್ಳಲು ಎನ್‌ಐಎ ತನಿಖೆ ನಡೆಸುವ ಸಾಧ್ಯತೆಯಿದೆ. ಆತ ಅಕ್ಟೋಬರ್, 2008ರಲ್ಲಿ ನೇಪಾಳದಿಂದ ಯುರೋಪ್‌ಗೆ ತೆರಳಲು ಈ ಪಾಸ್‌ಪೋರ್ಟ್‌ನ್ನು ಬಳಸಿಕೊಂಡಿದ್ದ ಎನ್ನಲಾಗಿದೆ.

ಉತ್ತರ ಕಾಶ್ಮೀರದ ನಿವಾಸಿಯಾದ ಮಿರ್ ಕಾಶ್ಮೀರದಲ್ಲಿಯ ಪ್ರತ್ಯೇಕತಾವಾದಿ ನಾಯಕರಿಗೆ ಹವಾಲಾ ಹಣವನ್ನು ರವಾನಿಸಲು ಕಾರ್ಪೆಟ್ ವ್ಯಾಪಾರವನ್ನು ಮತ್ತು ಬಳಿಕ ದುಬೈನಲ್ಲಿಯ ಹಣ ವಿನಿಮಯ ವ್ಯಾಪಾರವನ್ನು ಬಳಸಿಕೊಂಡಿದ್ದ. 2006,ಫೆ.3ರಂದು ಲಾಜಪತ್ ನಗರದಲ್ಲಿ ದಿಲ್ಲಿ ಪೊಲೀಸರು ಆತನನ್ನು ಬಂಧಿಸಿ, 55 ಲ.ರೂ.ನಗದು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.

ವಿಚಾರಣೆ ವೇಳೆ ತನ್ನ ತಾಯಿಯ ಅನಾರೋಗ್ಯದ ನೆಪವೊಡ್ಡಿ ಜಾಮೀನು ಪಡೆದುಕೊಳ್ಳಲು ಮಿರ್ ಯಶಸ್ವಿಯಾಗಿದ್ದ. ದುಬೈನಲ್ಲಿದ್ದಾನೆಂದು ಹೇಳಲಾಗಿರುವ ಮಿರ್ ಕೊಲ್ಲಿಯಲ್ಲಿ ಕಾರ್ಪೆಟ್ ಶೋರೂಮ್‌ಗಳು ಮತ್ತು ಹಣ ವಿನಿಮಯ ಸಂಸ್ಥೆಗಳನ್ನು ಹೊಂದಿದ್ದು, ಜಾಮೀನಿನಲ್ಲಿದ್ದಾಗ ಅಕ್ಟೋಬರ್,2008ರವರೆಗೆ ಸಮೀಪದ ಪೊಲೀಸ್ ಠಾಣೆಗೆ ನಿಯಮಿತವಾಗಿ ಹಾಜರಾಗುತ್ತಿದ್ದ. ಆದರೆ ಬಳಿಕ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಂಡಿದ್ದ. 2009ರಲ್ಲಿ ನ್ಯಾಯಾಲಯವು ಆತನ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್‌ನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News