ಬ್ರೆಬೋರ್ನ್ ಕ್ರೀಡಾಂಗಣ ರೋಹಿತ್‌ಗೆ ಅದೃಷ್ಟದ ತಾಣ

Update: 2018-10-30 18:22 GMT

ಮುಂಬೈ, ಅ.30: ಪ್ರತಿಯೊಬ್ಬ ಶ್ರೇಷ್ಠ ಕ್ರಿಕೆಟ್ ಆಟಗಾರನಿಗೂ ಒಂದೊಂದು ಕ್ರೀಡಾಂಗಣದಲ್ಲಿ ಅಪೂರ್ವ ಸೆಳೆತ ಇದ್ದೇ ಇರುತ್ತದೆ. ಮಾಜಿ ಕಲಾತ್ಮಕ ದಾಂಡಿಗ ವಿವಿಎಸ್ ಲಕ್ಷ್ಮಣ್ ಮತ್ತು ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅವರಿಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ನೆಚ್ಚಿನ ತಾಣ, ಮಾಜಿ ನಾಯಕ ಅನಿಲ್ ಕುಂಬ್ಳೆಗೆ ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯದ ಅಡಿಲೇಡ್ ಓವಲ್ ಇಷ್ಟದ ಕ್ರೀಡಾಂಗಣ. ಇದೀಗ ರೋಹಿತ್ ಶರ್ಮಾ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಯಾವುದೇ ಮಾದರಿಯ ಕ್ರಿಕೆಟ್ ಆಡುವುದು ತಮಗೆ ನೀರು ಕುಡಿದಷ್ಟೇ ಸುಲಭ ಎನ್ನುವುದನ್ನು ತೋರಿಸಿಕೊಟ್ಟರು. ರೋಹಿತ್ ಶರ್ಮಾ ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡಿದ್ದರೂ ಅವರಿಗೆ ತವರಿನ ಐತಿಹಾಸಿಕ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಅಂತರ್‌ರಾಷ್ಟ್ರೀಯ ಪಂದ್ಯ ಆಡುವ ಅವಕಾಶ ತಡವಾಗಿ ಸಿಕ್ಕಿದೆ. ತನ್ನ ಅದೃಷ್ಟದ ಈ ಕ್ರೀಡಾಂಗಣದಲ್ಲಿ ದೊರೆತ ಮೊದಲ ಅವಕಾಶದಲ್ಲಿ ರೋಹಿತ್ ಶರ್ಮಾ 162 ರನ್ ಸಿಡಿಸಿದ್ದಾರೆ.

 ವೆಸ್ಟ್‌ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಶರ್ಮಾ 162 ರನ್(137ಎ, 20ಬೌ, 4ಸಿ) ಗಳಿಸಿದರು. ರೋಹಿತ್ ಶರ್ಮಾ ಇದೇ ಕ್ರೀಡಾಂಗಣದಲ್ಲಿ ಟ್ವಿಂಟಿ-20 ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡವರು. ಗುಜರಾತ್ ವಿರುದ್ಧ ಅಂತರ್‌ರಾಜ್ಯ ಚೊಚ್ಚಲ ಟ್ವೆಂಟಿ-20 ಟೂರ್ನಮೆಂಟ್‌ನ (ಸೈಯದ್ ಮಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿ)ಪಂದ್ಯದಲ್ಲಿ ಮುಂಬೈ ತಂಡದ ಪರ ರೋಹಿತ್ ಶರ್ಮಾ 45 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ ಔಟಾಗದೆ 101 ರನ್ ಗಳಿಸಿದ್ದರು. 2009-10ರಲ್ಲಿ ಗುಜರಾತ್ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ತಂಡದ ರೋಹಿತ್ ಶರ್ಮಾ ತ್ರಿಶತಕ ದಾಖಲಿಸಿದ್ದರು. ರೋಹಿತ್ ಶರ್ಮಾ ಸೋಮವಾರ ಈ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಮೊದಲ ದಾಂಡಿಗ ಎಂಬ ದಾಖಲೆ ಬರೆದರು. ಅವರ ಬಳಿಕ ಶತಕ ದಾಖಲಿಸಿದ ಅಂಬಟಿ ರಾಯುಡು ಈ ಸಾಧನೆ ಮಾಡಿದ ಎರಡನೇ ದಾಂಡಿಗ ಎನಿಸಿಕೊಂಡರು. ‘‘ ರೋಹಿತ್ ಶರ್ಮಾ 50 ರನ್ ಗಳಿಸಿದರೆ ಅವರನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ’’ ಎಂದು ಕಳೆದ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಎದುರಾಳಿ ತಂಡ ಮುಂಬೈ ಇಂಡಿಯನ್ಸ್‌ನ ನಾಯಕ ರೋಹಿತ್ ಶರ್ಮಾ ಸಾಮರ್ಥ್ಯದ ಬಗ್ಗೆ ಹೇಳಿದ್ದರು. ಕೊಹ್ಲಿ ಅವರು ರೋಹಿತ್ ಶರ್ಮಾ ಸಾಮರ್ಥ್ಯದ ಬಗ್ಗೆ ಸರಿಯಾಗಿಯೇ ಹೇಳಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಪಂದ್ಯಗಳಲ್ಲಿ 6 ಬಾರಿ 150ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ. ಈ ಪೈಕಿ ಮೂರು ಬಾರಿ ದ್ವಿಶತಕ ದಾಖಲಿಸಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯ ವಿರುದ್ಧ 209 ರನ್, 2014ರಲ್ಲಿ ಕೋಲ್ಕತಾದಲ್ಲಿ ಶ್ರೀಲಂಕಾ ವಿರುದ್ಧ 264 ರನ್, 2015ರಲ್ಲಿ ಕಾನ್ಪುರದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 150 ರನ್, 2016ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಔಟಾಗದೆ 171 ರನ್, 2017ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಔಟಾಗದೆ 208ರನ್ ಮತ್ತು 2018ರಲ್ಲಿ ಮುಂಬೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 162 ರನ್ ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News