ದಾಂತೆವಾಡ ನಕ್ಸಲ್ ದಾಳಿ ಪ್ರಕರಣ: ಗಾಯಾಳು ಪೊಲೀಸ್ ಸಾವು, ಮೃತರ ಸಂಖ್ಯೆ ನಾಲ್ಕಕ್ಕೇರಿಕೆ
Update: 2018-10-31 21:57 IST
ರಾಯ್‌ಪುರ, ಅ.31: ಮಂಗಳವಾರ ಛತ್ತೀಸ್‌ಗಢದ ದಾಂತೆವಾಡ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರು ನಡೆಸಿದ್ದ ಹೊಂಚು ದಾಳಿಯ ಸಂದರ್ಭ ಗಂಭೀರ ಗಾಯಗೊಂಡಿದ್ದ ಪೊಲೀಸ್ ಕಾನ್‌ಸ್ಟೇಬಲ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.
ಮಂಗಳವಾರದ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ 35ರ ಹರೆಯದ ಅಸಿಸ್ಟೆಂಟ್ ಕಾನ್‌ಸ್ಟೇಬಲ್ ರಾಕೇಶ್ ಕೌಶಲ್ ಹಾಗೂ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾಕೇಶ್ ಬುಧವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮತ್ತೊಬ್ಬ ಗಾಯಾಳು ಕಾನ್‌ಸ್ಟೇಬಲ್ ವಿಷ್ಣು ನೇತಮ್‌ಗೆ ಚಿಕಿತ್ಸೆ ಮುಂದುವರಿದಿದೆ. ರಾಕೇಶ್ ಕೌಶಲ್ ದಾಂತೆವಾಡ ಜಿಲ್ಲೆಯ ಬರ್ಸೂರ್ ಗ್ರಾಮದ ನಿವಾಸಿ ಎಂದವರು ತಿಳಿಸಿದ್ದಾರೆ.