ರಾಕೇಶ್ ಅಸ್ತಾನ ಲಂಚ ಪ್ರಕರಣ: ಸಿಬಿಐ ಅಧಿಕಾರಿ ದೇವೇಂದ್ರ ಕುಮಾರ್‌ಗೆ ಜಾಮೀನು

Update: 2018-10-31 17:00 GMT

ಹೊಸದಿಲ್ಲಿ, ಅ.31: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ಲಂಚ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಲ್ಪಟ್ಟಿದ್ದ ಸಿಬಿಐ ಅಧಿಕಾರಿ ದೇವೇಂದ್ರ ಕುಮಾರ್‌ಗೆ ದಿಲ್ಲಿಯ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. 50 ಸಾವಿರ ರೂ. ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತದ ಜಾಮೀನು ಮುಚ್ಚಳಿಕೆ ಪಡೆದುಕೊಂಡು ದೇವೇಂದ್ರ ಕುಮಾರ್‌ರನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಧೀಶರು ಸೂಚಿಸಿದರು.

ಇದಕ್ಕೂ ಮುನ್ನ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ ವಾದ ಮಂಡಿಸಿದ ಕುಮಾರ್ ಪರ ವಕೀಲರು, ಈ ಪ್ರಕರಣದಲ್ಲಿ ಸಿಬಿಐ ಎಲ್ಲಾ ನಿಯಮಗಳನ್ನೂ ಉಲ್ಲಂಘಿಸಿದ್ದು ನಿಯಮದ ಪ್ರಕಾರ ನಡೆದುಕೊಂಡ ಅಧಿಕಾರಿ ದೇವೇಂದ್ರ ಕುಮಾರ್‌ರನ್ನು ಜೈಲಿಗಟ್ಟಿದೆ. ಕುಮಾರ್ ಮನೆಗೆ ದಾಳಿ ನಡೆಸಿ ಶೋಧ ನಡೆಸಲು ಸೂಕ್ತ ವಾರಂಟ್ ಕೂಡಾ ಸಿಬಿಐ ಬಳಿಯಿರಲಿಲ್ಲ. ಅಲ್ಲದೆ ಯಾವುದೇ ಸ್ವೀಕೃತಿ ಪತ್ರ ನೀಡದೆ ಮನೆಯಿಂದ 8 ಮೊಬೈಲ್ ಫೋನ್ ಹಾಗೂ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೂರಿದರು. ಕುಮಾರ್‌ಗೆ ಜಾಮೀನು ನೀಡುವ ಬಗ್ಗೆ ಸಿಬಿಐ ವಕೀಲರು ಆಕ್ಷೇಪ ಸೂಚಿಸಲಿಲ್ಲ. ಆದರೆ ಜಾಮೀನು ನೀಡುವಾಗ ಕಠಿಣ ಷರತ್ತುಗಳನ್ನು ವಿಧಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News