ಗುರುವಾರ ಭಾರತ-ವಿಂಡೀಸ್ ಅಂತಿಮ ಏಕದಿನ ಪಂದ್ಯ

Update: 2018-10-31 18:26 GMT

ತಿರುವನಂತಪುರ,ಅ.31: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ತಿರುವನಂತಪುರದಲ್ಲಿ ಗುರುವಾರ ನಡೆಯಲಿದೆ.

ತಿರುವನಂತಪುರದಲ್ಲಿ ದಶಕದ ಬಳಿಕ 50 ಓವರ್‌ಗಳ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದೆ.

ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ಅಂತಿಮ ಪಂದ್ಯದಲ್ಲಿ ಜಯಿಸಿದರೆ 3-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. 2015ರ ಬಳಿಕ ಭಾರತ ತವರಿನಲ್ಲಿ ಸತತ ಐದನೇ ಏಕದಿನ ಸರಣಿ ಗೆಲುವಿನ ಕಡೆಗೆ ಎದುರು ನೋಡುತ್ತಿದೆ . ಆದರೆ 2-2 ಸಮಬಲ ಸಾಧಿಸಲು ವೆಸ್ಟ್‌ಇಂಡೀಸ್ ಈ ಪಂದ್ಯದಲ್ಲಿ ಗೆಲ್ಲಬೇಕಾಗಿದೆ.

ವಿಂಡೀಸ್ ವಿರುದ್ಧ ಮೂರನೇ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಚೇತರಿಸಿಕೊಂಡ ಭಾರತ ಕ್ರಿಕೆಟ್ ತಂಡ ಕಳೆದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತ್ತು. ಮುಂಬೈನಲ್ಲಿ ಕಳೆದ ಪಂದ್ಯದಲ್ಲಿ ಭಾರತ 224 ರನ್‌ಗಳ ಗೆಲುವು ದಾಖಲಿಸಿತ್ತು.

ಮೊದಲ ಪಂದ್ಯ ಮತ್ತು ನಾಲ್ಕನೇ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿತ್ತು. ಎರಡನೇ ಪಂದ್ಯ ರೋಚಕ ಟೈ ಆಗಿತ್ತು. ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ದಾಖಲಿಸಿತ್ತು.

ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅಪೂರ್ವ ಫಾರ್ಮ್‌ನಲ್ಲಿದ್ದಾರೆ. ಕೊಹ್ಲಿ ಸರಣಿಯಲ್ಲಿ ಹ್ಯಾಟ್ರಿಕ್ ಶತಕ ದಾಖಲಿಸಿದ್ದರು. ರೋಹಿತ್ ಶರ್ಮಾ ಮೊದಲ ಮತ್ತು ನಾಲ್ಕನೇ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ. ಅಂಬಟಿ ರಾಯುಡು ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದರು.

ಆರಂಭಿಕ ದಾಂಡಿಗ ಶಿಖರ್ ಧವನ್ ದೊಡ್ಡ ಕೊಡುಗೆ ನೀಡಿಲ್ಲ. ಆದರೆ ಪಂದ್ಯದಿಂದ ಪಂದ್ಯಕ್ಕೆ ಅವರ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡು ಬಂದಿದೆ. 4 ಪಂದ್ಯಗಳಲ್ಲಿ ಅವರ ಸ್ಕೋರ್ ಒಟ್ಟು 106 ರನ್(4, 29, 35,38). ವಿಕೆಟ್ ಕೀಪರ್ ಧೋನಿ ವಿಕೆಟ್ ಕೀಪಿಂಗ್‌ನಲ್ಲಿ ಮಿಂಚುತ್ತಿದ್ದರೂ, ಬ್ಯಾಟಿಂಗ್‌ನಲ್ಲಿ ಕಳೆದ ಮೂರು ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಅವರು ಒಟ್ಟು 50 ರನ್(23,7 ಹಾಗೂ 20) ಜಮೆ ಮಾಡಿದ್ದಾರೆ. ತಂಡಕ್ಕೆ ವಾಪಸಾಗಿರುವ ಜಸ್‌ಪ್ರೀತ್ ಬುಮ್ರಾ ಕಳೆದ ಎರಡು ಪಂದ್ಯಗಳಲ್ಲೂ ಚೆನ್ನಾಗಿ ಆಡಿದ್ದಾರೆ. ಯುವ ವೇಗಿ ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ ಸುಧಾರಣೆ ಕಂಡು ಬಂದಿದೆ. ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಅವರು 13ಕ್ಕೆ 3 ವಿಕೆಟ್ ಉಡಾಯಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಅನುಭವಿ ವೇಗಿ ಭುವನೇಶ್ವರ ಕುಮಾರ್ ಅಂತಿಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ.

ಸ್ಪಿನ್ನರ್ ಕುಲ್‌ದೀಪ್ ಯಾದವ್ 42ಕ್ಕೆ 3 ವಿಕೆಟ್ ಪಡೆದಿದ್ದರು. ರವೀಂದ್ರ ಜಡೇಜ ಅವರಿಗೆ ಯಜುವೇಂದ್ರ ಚಹಾಲ್ ಕಳೆದ ಪಂದ್ಯದಲ್ಲಿ ಸ್ಥಾನ ಬಿಟ್ಟುಕೊಟ್ಟಿದ್ದರು. ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ಏಕದಿನ ಕ್ರಿಕೆಟ್‌ನಲ್ಲಿ ಸಾಕಷ್ಟು ಸುಧಾರಿಸಿಕೊಂಡಿದೆ. ಆಟಗಾರರ ಪೈಕಿ ಶಿಮ್ರಿನ್ ಹೆಟ್ಮೆಯರ್ ಮತ್ತು ಶಾಯ್ ಹೋಪ್ ತಲಾ 1 ಶತಕ ಸಿಡಿಸಿದ್ದಾರೆ. ಆಫ್ ಸ್ಪಿನ್ನರ್ ಆಶ್ಲೇ ನರ್ಸೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಭಾರತ

 ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ರಿಷಭ್ ಪಂತ್, ಕೇದಾರ್ ಜಾಧವ್, ಎಂ.ಎಸ್.ಧೋನಿ(ವಿಕೆಟ್ ಕೀಪರ್),ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಯಜುವೆಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಉಮೇಶ್ ಯಾದವ್, ಲೋಕೇಶ್ ರಾಹುಲ್, ಮನೀಷ್ ಪಾಂಡೆ.

ವೆಸ್ಟ್‌ಇಂಡೀಸ್

 ಜೇಸನ್ ಹೋಲ್ಡರ್(ನಾಯಕ), ಫ್ಯಾಬಿಯಾನೊ ಆ್ಯಲೆನ್, ಸುನೀಲ್ ಅಂಬ್ರಿಸ್, ಚಂದ್ರಪಾಲ್ ಹೇಮರಾಜ್, ಶಿಮ್ರಾನ್ ಹೆಟ್ಮೆಯೆರ್, ಶಾಯ್ ಹೋಪ್(ವಿಕೆಟ್ ಕೀಪರ್), ಅಲ್ಝಾರಿ ಜೋಸೆಫ್, ಎವಿನ್ ಲೆವಿಸ್, ಕೀಮೊ ಪೌಲ್, ಅಶ್ಲೆ ನರ್ಸೆ, ಕೀರನ್ ಪೊವೆಲ್, ರೊವ್‌ಮ್ಯಾನ್ ಪೊವೆಲ್ , ಕೇಮರ್ ರೋಚ್, ಮರ್ಲಾನ್ ಸ್ಯಾಮುಯೆಲ್ಸ್, ಒಶಾನೆ ಥಾಮಸ್.

ಪಂದ್ಯದ ಸಮಯ ಅಪರಾಹ್ನ  1:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News