ಉದ್ಯಾನವನದ ಅವ್ಯವಸ್ಥೆ

Update: 2018-10-31 18:49 GMT

ಮಾನ್ಯರೇ,

ಬೆಂಗಳೂರಿನ ವಿಜಯನಗರ ಬಡಾವಣೆಗೆ ಸೇರಿದ ವಿದ್ಯಾರಣ್ಯ ನಗರದಲ್ಲಿರುವ ಶ್ರೀ ಮುನೇಶ್ವರ ಉದ್ಯಾನವನದಲ್ಲಿ ಗಿಡಮರಗಳಿಗೆ ನೀರುಣಿಸಿ ಸುಮಾರು ಒಂದು ತಿಂಗಳೇ ಕಳೆದು ಹೋಗಿದೆ. ನಗರದಲ್ಲಿ ಬೇರೆ ಉದ್ಯಾನವನಗಳಿಗೆ ಇರುವಂತೆ ಇಲ್ಲಿ ವೈಜ್ಞಾನಿಕ ವಿಧಾನದ ಮೂಲಕ ನೀರನ್ನು ಸಿಂಪಡಿಸುವ ವ್ಯವಸ್ಥೆಯಿಲ್ಲ. ವಿವಿಧ ಬಗೆಯ ಸಸ್ಯವರ್ಗಗಳು ಒಣಗುತ್ತಿವೆ. ಇವುಗಳ ಮೂಕ ವೇದನೆ ಇಲ್ಲಿನ ಯಾವ ಸಭ್ಯ ನಾಗರಿಕರಿಗೂ ಕೇಳಿಸದೆ ಇರುವುದು ನಿಜಕ್ಕೂ ಶೋಚನೀಯ.

 ಉದ್ಯಾನವನದ ನಿರ್ವಹಣೆ ಮಾಡುವವರು ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. ಹೀಗಾಗಿ ಇಂತಹ ಅವ್ಯವಸ್ಥೆಯನ್ನೇ ಅವಕಾಶವಾಗಿ ಬಳಸಿಕೊಂಡು ಪುಂಡು-ಪೋಕರಿಗಳು ಧೂಮಪಾನ, ಮದ್ಯಪಾನ ಮಾಡುವುದಲ್ಲದೆ ಮತ್ತೇರಿ ಅಲ್ಲಿನ ಗಿಡಮರಗಳ ಮೇಲೆ ತೋರಿಸುತ್ತಿದ್ದಾರೆ. ಇಲ್ಲಿ ಕಸದ ಬುಟ್ಟಿಗಳ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯ ವಾಯು ವಿಹಾರಿಗಳು ತಿಂಡಿ-ತಿನಿಸುಗಳು ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಹೀಗಾಗಿ ನಾಗರಿಕರು ಇಲ್ಲಿ ಬೆಳಗ್ಗೆ, ಸಂಜೆ ಹೊತ್ತು ವಾಕಿಂಗ್, ವ್ಯಾಯಾಮ ಮಾಡಲು ಬಂದರೆ ಸೊಳ್ಳೆಗಳ ಕಡಿತ ಗ್ಯಾರಂಟಿ.

ಆದ್ದರಿಂದ ಇನ್ನಾದರೂ ಪರಿಸರ ಸಂರಕ್ಷಣೆ ಹಾಗೂ ನಾಗರಿಕರ ಕಾಳಜಿಯ ದೃಷ್ಟಿಯಿಂದ, ಬೃ.ಬೆಂ.ಮ.ಪಾ, ತೋಟಗಾರಿಕೆ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿ ವರ್ಗದವರು, ರಾಜಕೀಯ ನಾಯಕರು ಈ ಉದ್ಯಾನವನದ ಅವ್ಯವಸ್ಥೆಯ ಬಗ್ಗೆ ಶೀಘ್ರವಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ‘‘ನಮ್ಮ ಬೆಂಗಳೂರು ಸುಂದರ ಉದ್ಯಾನವನಗಳ ನಗರಿ’ ’ಎಂಬ ಹೆಸರು ಎಂದೆಂದಿಗೂ ಅಳಿಯದಿರಲಿ.

Writer - -ರಾಜೇಶ್ ಎನ್.ಪಿ., ಬೆಂಗಳೂರು

contributor

Editor - -ರಾಜೇಶ್ ಎನ್.ಪಿ., ಬೆಂಗಳೂರು

contributor

Similar News