ಖಶೋಗಿ ಸೌದಿ ಕಾನ್ಸುಲೇಟ್ ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಉಸಿರುಗಟ್ಟಿಸಿ, ಕತ್ತರಿಸಿ ಹತ್ಯೆ: ಟರ್ಕಿ

Update: 2018-11-01 03:37 GMT

ಇಸ್ತಾಂಬುಲ್, ನ.1: ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್ ಖಶೋಗಿ ಅವರನ್ನು ಹೇಗೆ ಹತ್ಯೆ ಮಾಡಲಾಗಿದೆ ಎಂಬ ಬಗೆಗಿನ ವಿಸ್ತೃತ ವರದಿಯನ್ನು ಟರ್ಕಿ ಬುಧವಾರ ಬಿಡುಗಡೆ ಮಾಡಿದೆ. ಖಶೋಗಿ ಸೌದಿ ಕಾನ್ಸುಲೇಟ್ ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಸೌದಿ ಏಜೆಂಟರು ಅವರನ್ನು ಉಸಿರುಗಟ್ಟಿಸಿ, ಕತ್ತರಿಸಿ ಹತ್ಯೆ ಮಾಡಿದರು ಎಂದು ಟರ್ಕಿಯ ಅತ್ಯುನ್ನತ ಸರ್ಕಾರಿ ವಕೀಲರು ಪ್ರಕಟಿಸಿದ್ದಾರೆ.

ಆದರೆ ಖಶೋಗಿಯವರ ದೇಹವನ್ನು ಹೇಗೆ ಸಾಗಿಸಲಾಯಿತು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ ಉನ್ನತ ಟರ್ಕಿ ಅಧಿಕಾರಿಯೊಬ್ಬರು ಸಂದರ್ಶನವೊಂದರಲ್ಲಿ ಹೇಳಿರುವಂತೆ, "ಖಶೋಗಿಯವರ ಛಿದ್ರಗೊಂಡಿದ್ದ ದೇಹವನ್ನು ಸೌದಿ ಕಾನ್ಸುಲೇಟ್ ಕಚೇರಿ ಅಥವಾ ಸೌದಿ ಕಾನ್ಸುಲ್ ಜನರಲ್ ಅವರ ನಿವಾಸದ ಬಳಿ ಆ್ಯಸಿಡ್ ಹಾಕಿ ನಾಶಪಡಿಸಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಾನ್ಸುಲೇಟ್ ಉದ್ಯಾನವನದಲ್ಲಿ ಸಿಕ್ಕಿರುವ ಜೈವಿಕ ಪುರಾವೆಗಳು ಇದಕ್ಕೆ ಪುಷ್ಟಿ ನೀಡುತ್ತವೆ"

ಇದರಿಂದಾಗಿ ಖಶೋಗಿ ದೇಹವನ್ನು ದಫನ ಮಾಡುವ ಅಗತ್ಯವೇ ಬರಲಿಲ್ಲ ಎಂದು ಗುರುತು ಬಹಿರಂಗಪಡಿಸಲು ಇಚ್ಛಿಸದ ತನಿಖಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಖಶೋಗಿಯವರನ್ನು ಕಾನ್ಸುಲೇಟ್ ಕಚೇರಿಯಲ್ಲೇ ಹತ್ಯೆ ಮಾಡಲಾಗಿದೆ ಎನ್ನುವುದನ್ನು ಸೌದಿ ಅರೇಬಿಯಾ ಒಪ್ಪಿಕೊಂಡಿದ್ದು, ಹಂತಕರು ದೇಹವನ್ನು ವಿಲೇವಾರಿಗಾಗಿ, ಹತ್ಯೆಯಲ್ಲಿ ಶಾಮೀಲಾದ ಸ್ಥಳೀಯರೊಬ್ಬರಿಗೆ ನೀಡಿದ್ದರು ಎಂದು ಹೇಳಿಕೊಂಡಿದೆ. ಆದರೆ ಮೃತದೇಹ ಇಡಿಯಾಗಿ ಇರಲೇ ಇಲ್ಲ ಎನ್ನುವುದು ಟರ್ಕಿ ಅಧಿಕಾರಿಗಳ ವಾದ.

ಕಾನ್ಸುಲೇಟ್ ಕಚೇರಿ ಪ್ರವೇಶಿಸಿದ ತಕ್ಷಣ ಖಶೋಗಿಯನ್ನು ಪೂರ್ವಯೋಜನೆಯಂತೆ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದ್ದು, ಆ ಬಳಿಕ ದೇಹವನ್ನು ತುಂಡು ತುಂಡು ಮಾಡಲಾಗಿತ್ತು. ಬಳಿಕ ಛಿದ್ರದೇಹವನ್ನು ಕೂಡಾ ಆ್ಯಸಿಡ್ ಹಾಕಿ ನಾಶಪಡಿಸಲಾಗಿದೆ ಎನ್ನುವುದು ಟರ್ಕಿ ಅಧಿಕಾರಿಗಳ ಊಹೆ. ಸೌದಿಯಿಂದ ಬಂದಿದ್ದ 15 ಹಂತಕರ ತಂಡ ಈ ಕೃತ್ಯ ಎಸಗಿದೆ ಎಂದು ಟರ್ಕಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News