ರಾಕೇಶ್ ಅಸ್ತಾನ ವಿರುದ್ಧ ಮಹತ್ವದ ದಾಖಲೆಗಳಿವೆ: ದಿಲ್ಲಿ ಹೈಕೋರ್ಟಿಗೆ ತಿಳಿಸಿದ ಸಿಬಿಐ

Update: 2018-11-01 10:49 GMT

ಹೊಸದಿಲ್ಲಿ, ನ.1: ತನ್ನ ವಿರುದ್ಧ ದಾಖಲಿಸಲಾಗಿರುವ ಎಫ್‍ಐಆರ್ ರದ್ದುಪಡಿಸುವಂತೆ ಕೋರಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಸಲ್ಲಿಸಿರುವ ಅಪೀಲಿನ ಮೇಲಿನ ವಿಚಾರಣೆಯ ಸಂದರ್ಭ ಇಂದು ದಿಲ್ಲಿ ಹೈಕೋರ್ಟಿನಲ್ಲಿ ಅಸ್ತಾನ ಅವರ ಅಪೀಲನ್ನು ಸಿಬಿಐ ಬಲವಾಗಿ ವಿರೋಧಿಸಿದೆ. ತನ್ನ ಬಳಿ ರಾಕೇಶ್ ಅಸ್ತಾನ ಹಾಗೂ ಇತರರ ವಿರುದ್ಧದ ಮಹತ್ವದ ದಾಖಲೆಗಳಿದ್ದು, ಅವರ ವಿರುದ್ಧದ ಆರೋಪಗಳು ಗುರುತಿಸಬಹುದಾದ ಅಪರಾಧಗಳಾಗಿವೆ ಎಂದು ತಿಳಿಸಿದೆ. ಕೆಲ ದಾಖಲೆಗಳನ್ನು ಕೇಂದ್ರ ಜಾಗೃತ ಆಯೋಗ ಪರಿಶೀಲಿಸುತ್ತಿರುವುದರಿಂದ ಸದ್ಯ ತನ್ನ ಕೈಕಟ್ಟಿದೆ ಎಂದೂ ಸಿಬಿಐ ತಿಳಿಸಿದೆ.

ಅಸ್ತಾನ ಅವರ ಅಪೀಲಿಗೆ ತನ್ನ ಉತ್ತರವನ್ನು ಸಲ್ಲಿಸದೇ ಇರುವುದಕ್ಕೆ ಹೈಕೋರ್ಟ್ ಸೋಮವಾರ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿತ್ತು. ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್ನುಗಳನ್ವಯ ತನ್ನ ಹಾಗೂ ಇತರ ಮೂವರ ವಿರುದ್ಧ ಅಕ್ಟೋಬರ್ 15ರಂದು ದಾಖಲಿಸಲ್ಪಟ್ಟಿರುವ ಎಫ್‍ಐಆರ್ ಅನ್ನು ರದ್ದುಗೊಳಿಸುವಂತೆ ಅಸ್ತಾನ ಈ ಅಪೀಲು ಸಲ್ಲಿಸಿದ್ದಾರೆ. ಮಾಂಸ ರಫ್ತುದಾರ ಮೊಯಿನ್ ಖುರೇಶಿ ವಿರುದ್ಧದ ಸಿಬಿಐ ತನಿಖೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳದೇ ಇರುವಂತೆ ಮಾಡಲು ರೂ 3 ಕೋಟಿ ಲಂಚ ಪಡೆದ ಆರೋಪವನ್ನು ಅಸ್ತಾನ ಎದುರಿಸುತ್ತಿದ್ದಾರೆ. ಸಿಬಿಐಯ ಅತ್ಯುನ್ನತ ಅಧಿಕಾರಿ ತಮ್ಮದೇ ಕ್ರಿಮಿನಲ್ ಕೃತ್ಯವನ್ನು ಅಡಗಿಸಲು ತಮ್ಮ ವಿರುದ್ಧ ಈ ಸುಳ್ಳು ಆರೋಪ ಹೊರಿಸಿದ್ದಾರೆಂದು ಅಸ್ತಾನ ತನ್ನ ದೂರಿನಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News