ಕೆನ್ ನದಿಯಲ್ಲಿ ಮರಳುಗಾರಿಕೆ ವಿರುದ್ಧ ರೈತರ ‘ಜಲ ಸತ್ಯಾಗ್ರಹ’
ಬಾಂದಾ(ಉ.ಪ್ರ),ನ.1: ಬುಂದೇಲಖಂಡ್ ಪ್ರದೇಶದ,ಇಲ್ಲಿಯ ಗಿರ್ವಾನ್‌ನ ಕೋಲವಾಲ ರಾಯಪುರ ಸಮೀಪದ ಕೆನ್ ನದಿಯಲ್ಲಿ ಮರಳು ಗಣಿಗಾರಿಕೆಯನ್ನು ವಿರೋಧಿಸಿ 50 ಮಹಿಳೆಯರು ಸೇರಿದಂತೆ 300ಕ್ಕೂ ಅಧಿಕ ರೈತರು ಗುರುವಾರ ಜಲ ಸತ್ಯಾಗ್ರಹವನ್ನು ಆರಂಭಿಸಿದರು.
ಮರಳು ಗಣಿಗಾರಿಕೆಯಿಂದ ತಮ್ಮ ಬೆಳೆಗಳಿಗೆ ಹಾನಿಯಾಗುತ್ತಿರುವುದರಿಂದ ಅದನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ನದಿಯಲ್ಲಿಳಿದು ಜಲ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಕಂಪನಿಯು ಮಂಜೂರಾದ ಸ್ಥಳವನ್ನು ಬಿಟ್ಟು ಬೇರೆ ಸ್ಥಳದಲ್ಲಿ ಮರಳು ತೆಗೆಯುತ್ತಿದೆ ಮತ್ತು ಮರಳು ಲಾರಿಗಳ ಸಾಗಾಟಕ್ಕಾಗಿ ನದಿಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ವಿದ್ಯಾಧಾಮ ಸಮಿತಿ ಮತ್ತು ಚಿಂಗಾರಿ ಸದಸ್ಯರೊಂದಿಗೆ ಮಾತುಕತೆಗೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ನಾರಾಯಿಣಿ ಉಪವಿಭಾಗಾಧಿಕಾರಿ ಎ.ಕೆ.ಶ್ರೀವಾಸ್ತವ ಅವರು ಸುದ್ದಿಗಾರರಿಗೆ ತಿಳಿಸಿದರು.
ರವಿವಾರ ಮರಳು ತುಂಬಿದ ಲಾರಿಗಳು ತಮ್ಮ ಹೊಲಗಳಿಂದ ಹಾದು ಹೋಗುವುದನ್ನು ತಾವು ಪ್ರತಿಭಟಿಸಿದಾಗ ಮರಳು ಮಾಫಿಯಾದ ಗೂಂಡಾಗಳು ರೈತರ ಮೇಲೆ ಗುಂಡುಗಳನ್ನು ಹಾರಿಸಿದ್ದಾರೆ ಎಂದು ಪ್ರತಿಭಟನೆಯ ಸಂಘಟಕರಾದ ರಾಜಾಭೈಯಾ ಸಿಂಗ್ ಮತ್ತು ಶಹ್ರೋಝ್ ಫಾತಿಮಾ ಅವರು ಆರೋಪಿಸಿದರು.
ನಾವು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವಾದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ,ಬದಲಾಗಿ ಜೈಲಿಗೆ ಕಳುಹಿಸುವುದಾಗಿ ರೈತರಿಗೇ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಅಕ್ರಮ ಮರಳುಗಾರಿಕೆಯ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದೆ,ಆದರೆ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ಅವರು ಆಪಾದಿಸಿದರು.