2019ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಕ್ಷಮಿಸಬೇಡಿ: ಯಶ್ವಂತ್ ಸಿನ್ಹಾ

Update: 2018-11-01 16:03 GMT

ಜುಂಗಾಧ್, ನ. 1: ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರು ಎಂದಿಗೂ ಕ್ಷಮಿಸಬಾರದು ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಬುಡಮೇಲು ಮಾಡಬೇಕು ಎಂದು ಮಾಜಿ ಸಚಿವ ಯಶ್ವಂತ್ ಸಿನ್ಹಾ ಬುಧವಾರ ಹೇಳಿದ್ದಾರೆ.

ಗುಜರಾತ್‌ನ ಜುನಾಗಢ್ ಜಿಲ್ಲಿಯ ವಾಂಥಾಲಿಯಲ್ಲಿ ಸೇರಿದ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ‘‘ಈ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ರೈತರು, ಮಹಿಳೆಯ, ದಲಿತರು-ಹೀಗೆ ಪ್ರತಿಯೊಬ್ಬರು ಸಂತ್ರಸ್ತರಾಗಿದ್ದಾರೆ. ಕೇವಲ ಹೊಸ ಘೋಷಣೆಗಳನ್ನು ಮಾತ್ರ ನೀಡಲಾಗುತ್ತಿದೆ. ಒಂದೇ ಪರಿಹಾರವೆಂದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸರಕಾರವನ್ನು ಬುಡಮೇಲು ಮಾಡುವುದು’’ ಎಂದು ಸಿನ್ಹಾ ಹೇಳಿದ್ದಾರೆ. ‘‘2014ರಲ್ಲಿ ಸಾರ್ವತ್ರಿಕ ಚುನಾವಣೆ ಸಂದರ್ಭ ಭರವಸೆ ನೀಡಿದಾಗ, ನಾನು ಬಿಜೆಪಿಯ ಭಾಗವಾಗಿದ್ದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೀವು ಮೋದಿ ಅವರನ್ನು ಕ್ಷಮಿಸುವುದನ್ನು ನಾನು ಬಯಸಲಾರೆ’’ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಆಗಾಗ ಟೀಕಿಸುತ್ತಿದ್ದ ಮಾಜಿ ವಿತ್ತ ಸಚಿವ ಯಶ್ವಂತ್ ಸಿನ್ಹಾ ಈ ವರ್ಷ ಎಪ್ರಿಲ್‌ನಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನರ್ಮದಾ ಜಿಲ್ಲೆಯಲ್ಲಿ 182 ಮೀಟರ್ ಎತ್ತರ ಇರುವ ಸರ್ದಾರ್ ವಲ್ಲಭಾ ಭಾಯ್ ಪಟೇಲ್ ಪ್ರತಿಮೆಯನ್ನು ಬುಧವಾರ ಲೋಕಾರ್ಪಣೆಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ಅವರು ಈ ಕಾರ್ಯಕ್ರಮದಲ್ಲಿ ರೈತ ಪರ ಕಾರ್ಯಕ್ರಮಗಳನ್ನು ಘೋಷಿಸಬೇಕಿತ್ತು ಎಂದಿದ್ದಾರೆ. ಅವರು ರೈತರ ಪರವಾದ ಯೋಜನೆಗಳನ್ನು ಘೋಷಿಸಿಲ್ಲ. ಯಾಕೆಂದರೆ ಅವರು ರೈತರನ್ನು ಮರೆತಿದ್ದಾರೆ ಎಂದು ಅವರು ಹೇಳಿದರು. ಸಭೆಯಲ್ಲಿ ಬಿಜೆಪಿ ಅತೃಪ್ತ ಸಂಸದ ಶತ್ರುಘ್ನ ಸಿನ್ಹಾ ಕೂಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News