ಅಂತ್ಯಸಂಸ್ಕಾರ ನಡೆದು 15 ದಿನಗಳ ನಂತರ ‘ಸತ್ತ’ ವ್ಯಕ್ತಿ ಜೀವಂತವಾಗಿ ಬಂದ!

Update: 2018-11-02 13:42 GMT

ಕೊಝಿಕ್ಕೋಡ್, ನ.2: ನಲ್ವತ್ತೆಂಟು ವರ್ಷದ ಸಾಜಿ ಇತ್ತೀಚೆಗೆ ತನ್ನ ಊರಾದ ವಯನಾಡಿನ ಆಡಿಕ್ಕೊಳ್ಳಿಗೆ ಮರಳಿದಾಗ ಆತನ  ತೆಕ್ಕನಮ್ ಕುನ್ನೆಲ್ ಕುಟುಂಬಕ್ಕಾದ ಆಘಾತ ಅಷ್ಟಿಷ್ಟಲ್ಲ. ಮನೆಯಿಂದ ಹಲವು ದಿನಗಳ ಕಾಲ ನಾಪತ್ತೆಯಾಗಿದ್ದ ಆತನದ್ದೆಂದು ತಿಳಿಯಲಾದ ಮೃತದೇಹ ಪತ್ತೆಯಾದ ನಂತರ ಅಂತ್ಯಸಂಸ್ಕಾರವನ್ನೂ ಆತನ ಕುಟುಂಬ 15 ದಿನಗಳ ಹಿಂದೆ ಮಾಡಿ ಮುಗಿಸಿತ್ತು.

ದಿನಗೂಲಿ ಕಾರ್ಮಿಕನಾಗಿರುವ ಸಾಜಿ ಸೆಪ್ಟೆಂಬರ್ 3ರಿಂದ ನಾಪತ್ತೆಯಾಗಿದ್ದ. ಆತನ ಕುಟುಂಬ ಪೊಲೀಸ್ ದೂರು ನೀಡಿದಾಗ ಕರ್ನಾಟಕದ ಬೈರಕುಪ್ಪ ಸಮೀಪದ ಅರಣ್ಯದಲ್ಲಿ ಭಾಗಶಃ ಕೊಳೆತು ಹೋದ ಮೃತದೇಹವೊಂದು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದಾಗ ಆತನ ಸೋದರ ಜಿನೇಶ್ ಸಹಿತ ಇತರ ಕುಟುಂಬ ಸದಸ್ಯರು ಅಲ್ಲಿಗೆ ತೆರಳಿದ್ದರು. ಧರಿಸಿದ್ದ ಬಟ್ಟೆ, ಚಪ್ಪಲಿ ಹಾಗೂ ಕಾಲಿನಲ್ಲಿರುವ ಶಸ್ತ್ರಕ್ರಿಯೆಯ ಗುರುತು ಪತ್ತೆ ಹಚ್ಚಿ ಅದು ಸಾಜಿಯದ್ದೇ ಎಂದು ತೀರ್ಮಾನಕ್ಕೆ ಬಂದು ಅಡಿಕೊಳ್ಳಿಯ ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ಅಕ್ಟೋಬರ್ 16ರಂದು ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಆದರೆ ಇತ್ತೀಚೆಗೆ ಸಾಜಿಗೆ ಪನಮರಂ ಬಸ್ ನಿಲ್ದಾಣದಲ್ಲಿ ಸೋದರ ಸಂಬಂಧಿ ಸುನಿಲ್ ಸಿಕ್ಕಿದ್ದು, ಆತ ತನ್ನನ್ನು ನೋಡಿ ಆಘಾತಗೊಂಡಿದ್ದನ್ನು ಗಮನಿಸಿದ್ದ. ಆಗಲೇ ಮನೆಯವರು ತಾನು ಸತ್ತಿದ್ದೇನೆಂದು ತಿಳಿದಿದ್ದಾರೆಂದು ಸಾಜಿಗೆ ಅರಿವಾಗಿತ್ತು.. ಕಣ್ಣೂರಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆತ ನಂತರ ಮನೆಗೆ ಮರಳಿದ್ದಾನೆ.

ಇದೀಗ ಚರ್ಚ್ ತನ್ನ ಜಾಗದಲ್ಲಿ ಹೂತ ಬೇರೊಬ್ಬರ ಶವವನ್ನು ಬೇರೆಡೆಗೆ ಸಾಗಿಸಬೇಕೆಂದು ಕುಟುಂಬಕ್ಕೆ ತಿಳಿಸಿದೆ. ಶಾಜಿಯ ಸೋದರ ಈ ಬಗ್ಗೆ ಕರ್ನಾಟಕದ ಬೀಚನಹಳ್ಳಿ ಪೊಲೀಸರಿಗೆ ತಿಳಿಸಿದ್ದು, ಅವರು ಅಲ್ಲಿಗೆ ಬಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂಬ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News