ನನ್ನನ್ನು ಕೊಲ್ಲುತ್ತಾರೆ ಎಂಬುದು ಖಾತರಿಯಾಗಿದೆ: ಕಥುವಾ ಅತ್ಯಾಚಾರ ಸಂತ್ರಸ್ತೆಯ ವಕೀಲೆ ದೀಪಿಕಾ ಸಿಂಗ್ ಆತಂಕ

Update: 2018-11-02 14:04 GMT

 ಶ್ರೀನಗರ, ನ.2: ಒಂದಲ್ಲ ಒಂದು ದಿನ ಅವರು ನನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ನನಗೆ ತಿಳಿದಿದೆ. ಆದ್ದರಿಂದ ದಿನದ 24 ಗಂಟೆಯೂ ಹೆಚ್ಚುವರಿ ಜಾಗರೂಕತೆ ವಹಿಸಿ ಎಚ್ಚರಿಕೆಯಿಂದ ಇರುತ್ತೇನೆ. ಮನೆಯಿಂದ ಹೊರಗೆ ಹೋಗುವಾಗ ಅಥವಾ ಒಳಬರುವಾಗ ಮನೆಯ ಗೇಟನ್ನು ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಯುತ್ತೇನೆ - ಇದು ಜಮ್ಮುವಿನ ನಿವಾಸಿ, 38 ವರ್ಷದ ವಕೀಲೆ ದೀಪಿಕಾ ಸಿಂಗ್ ರಜಾವತ್ ಅವರ ಆತಂಕದ ನುಡಿಗಳು.

ಇವರ ಆತಂಕಕ್ಕೆ ಕಾರಣ ಇಷ್ಟೇ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ರಸಾನ ಎಂಬಲ್ಲಿ ದುರುಳರಿಂದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೀಡಾದ 8 ವರ್ಷದ ಬಾಲಕಿಯ ಪ್ರಕರಣದಲ್ಲಿ ಸಂತ್ರಸ್ತೆಯ ಪರ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವುದು ದೀಪಿಕಾ ಸಿಂಗ್‌ಗೆ ಕೊಲೆ ಬೆದರಿಕೆ ಬರಲು ಕಾರಣವಾಗಿದೆ. ತನ್ನ ಮಗಳು, ಪತಿ ಹಾಗೂ ತನ್ನ ಸುರಕ್ಷತೆಯ ಕುರಿತು ಈಗ ಇವರಿಗೆ ಭೀತಿ ಎದುರಾಗಿದೆ. ಇವರಿಗೆ ಸರಕಾರ ಪೊಲೀಸ್ ಭದ್ರತೆ ಒದಗಿಸಿದ್ದರೂ ಈಕೆಗೆ ಸಾಮಾಜಿಕ ಜಾಲತಾಣ ಹಾಗೂ ಫೋನ್ ಮೂಲಕ ಬೆದರಿಕೆ ಮತ್ತು ನಿಂದನೆ ಕರೆಗಳು ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ‘ ದೇಶ ವಿರೋಧಿ’ ಎಂಬ ಹಣೆಪಟ್ಟಿ ಕಟ್ಟಲಾಗಿದೆ.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಬಳಿಕ ತನ್ನ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಇದೀಗ ತನ್ನ ಬದುಕು ಸಂಪೂರ್ಣ ಬದಲಾಗಿದೆ. ಸಹೋದ್ಯೋಗಿಗಳು, ಬಂಧುಗಳು ಹಾಗೂ ನೆರೆಹೊರೆಯವರು ಮಾತು ಬಿಟ್ಟಿದ್ದಾರೆ. ತನ್ನ ಕುಟುಂಬದವರಿಗೆ ಅಥವಾ ತನ್ನ ಮೇಲೆ ದೈಹಿಕ ಹಲ್ಲೆ ನಡೆಯುವ ಭೀತಿಯಿದೆ. ಅಲ್ಲದೆ ಮನೆಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಇಡುವ ಮೂಲಕ ತನ್ನ ಘನತೆಗೆ ಕುಂದುಂಟು ಮಾಡುವ ಸಾಧ್ಯತೆಯಿದೆ ಎಂದು ದೀಪಿಕಾ ಸಿಂಗ್ ಹೇಳಿದ್ದಾರೆ. ವಿಚಾರಣೆ ಸಾಗುತ್ತಿರುವ ಜಮ್ಮುವಿನ ವಿಚಾರಣಾ ನ್ಯಾಯಾಲಯದಲ್ಲಿ ತಾನು ವಕೀಲರ ಗುಂಪು, ಪೊಲೀಸರ ಗುಂಪು ಅಥವಾ ಅರ್ಜಿದಾರರ ಗುಂಪಿನ ಮಧ್ಯೆ ಹಾದುಹೋಗುವಾಗ ಎಲ್ಲೆಡೆ ಮೌನ ಆವರಿಸುತ್ತದೆ. ಈ ಮಹಿಳೆಯೇ ಆಗಾಗ ಟಿವಿ ಮತ್ತು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಂದು ಕೆಲವರ ಪಿಸುಮಾತು ಕೇಳಿ ಬರುತ್ತದೆ ಎಂದವರು ಹೇಳುತ್ತಾರೆ.

ಈ ಪ್ರಕರಣದಲ್ಲಿ ದೀಪಿಕಾ ಖುದ್ದು ಸಂತ್ರಸ್ತೆಯ ಕುಟುಂಬವನ್ನು ಸಂಪರ್ಕಿಸಿ ಪ್ರಕರಣದಲ್ಲಿ ತಾನು ವಾದಿಸುವುದಾಗಿ ಅವರ ಮನವೊಲಿಸಿದ್ದರು. ಓರ್ವ ಮಹಿಳೆ, ತಾಯಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ , ಎಲ್ಲಕ್ಕಿಂತ ಹೆಚ್ಚಾಗಿ ಜವಾಬ್ದಾರಿಯುತ ಪ್ರಜೆಯಾಗಿ ತಾನು ನಿರ್ಧಾರಕ್ಕೆ ಬಂದಿದ್ದೆ. ಪ್ರಕರಣವನ್ನು ನಿರ್ವಹಿಸುವುದಾಗಿ ಇದೇ ಪ್ರಪ್ರಥಮ ಬಾರಿಗೆ ನಾನೇ ಅರ್ಜಿದಾರರ ಬಳಿ ಹೋಗಿ ವಿನಂತಿಸಿದ್ದೇನೆ. ಈ ಪ್ರಕರಣದಲ್ಲಿ ಸ್ವಯಂಪ್ರೇರಿತವಾಗಿ ಮತ್ತು ಉಚಿತವಾಗಿ ವಾದ ಮಂಡಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ತನ್ನ ನಿರ್ಧಾರದ ಬಗ್ಗೆ ಮನೆಯವರು, ಕುಟುಂಬ ವರ್ಗದವರು ಅಸಮ್ಮತಿ ಸೂಚಿಸಿದ್ದಾರೆ. ಆದರೆ ಸಂತ್ರಸ್ತ ಬಾಲಕಿಯ ಕುಟುಂಬವನ್ನು ಅರ್ಧದಲ್ಲಿ ಕೈಬಿಡಲು ತಾನು ಸಿದ್ಧವಿಲ್ಲ . ತನ್ನ ನಿರ್ಧಾರದಿಂದ ಪೋಷಕರಿಗೆ ಅವಮಾನವಾದರೆ ಅವರು ಬೇಕಿದ್ದರೆ ತನ್ನೊಂದಿಗಿನ ಸಂಬಂಧವನ್ನು ಕಡಿದು ಹಾಕಿಕೊಳ್ಳಲಿ ಎಂದವರು ಹೇಳುತ್ತಾರೆ. ಜನತೆಯ ನಿಂದನೆಯ ಮಾತು ತನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇದೀಗ ತನ್ನ ಆರು ವರ್ಷದ ಮಗಳು ಕೂಡಾ ಮಾನವೀಯತೆಯ ಬಗ್ಗೆ ಅರಿವು ಬೆಳೆಸಿಕೊಂಡಿದ್ದಾಳೆ ಎಂದು ದೀಪಿಕಾ ಹೇಳಿದ್ದಾರೆ.

ಆದರೆ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ನ್ಯಾಯಾಲಯದಲ್ಲಿ ತನ್ನ ಕೆಲವು ಸಹೋದ್ಯೋಗಿಗಳು ಈಗ ತನಗೆ ಸಹಕಾರ ನೀಡುತ್ತಿದ್ದಾರೆ. ತನ್ನ ಸಮುದಾಯದ ಕೆಲವರೂ ತನ್ನ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ ಎನ್ನುವ ದೀಪಿಕಾ, ಇದೀಗ ಈ ಪ್ರಕರಣ ವಿಶ್ವಮಟ್ಟದಲ್ಲಿ ಸುದ್ಧಿಯಾಗಿರುವ ಕಾರಣ , ತನಗೆ ಹಾನಿ ಎಸಗಲು ವಿರೋಧಿಗಳು ಹಿಂದು ಮುಂದು ನೋಡುವಂತಾಗಿದೆ ಎನ್ನುತ್ತಾರೆ. ಆದರೆ ಒಂದಲ್ಲ ಒಂದು ದಿನ ಇವರಿಂದ ಅಪಾಯ ತಪ್ಪಿದ್ದಲ್ಲ ಎಂಬುದಂತೂ ಖಂಡಿತ ಎಂದೂ ಸೇರಿಸುತ್ತಾರೆ.

ಕಥುವಾದಲ್ಲಿ ಬಕರ್‌ವಾಲ್ ಸಮುದಾಯದ ಎಂಟು ವರ್ಷದ ಬಾಲಕಿಯ ಮೇಲೆ ಎಂಟು ವ್ಯಕ್ತಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಸಮುದಾಯದವರಲ್ಲಿ ಭಯ ಹುಟ್ಟಿಸಿ ಅವರನ್ನು ಅಲ್ಲಿಂದ ಓಡಿಸುವುದು ಈ ಭೀಭತ್ಸ ಕೃತ್ಯದ ಹಿಂದಿನ ಉದ್ದೇಶವಾಗಿತ್ತು. ಆದರೆ ಆರೋಪಿಗಳಿಗೆ ಬೆಂಬಲ ಸೂಚಿಸಿ ಜಮ್ಮುವಿನ ಕೆಲವು ವಕೀಲರೂ ಪಾಲ್ಗೊಂಡಿದ್ದ ಪ್ರತಿಭಟನಾ ರ್ಯಾಲಿ ನಡೆದಿತ್ತು.

ಮುಸ್ಲಿಂ ಬಾಲಕಿಯ ಪರ ವಹಿಸಿದ್ದಕ್ಕೆ ದೇಶದ್ರೋಹಿ ಪಟ್ಟ ತನ್ನನ್ನು ದೇಶ ವಿರೋಧಿ ಎಂದು ಹೀಗಳೆದಾಗ ಪತಿ ಆಕ್ರೋಶಗೊಂಡಿದ್ದರು. ಸ್ವಯಂ ಅಪಾಯಕ್ಕೆ ಒಡ್ಡಿಕೊಳ್ಳಬೇಡ ಎಂದು ಸಹೋದರ ಹಾಗೂ ಪೋಷಕರು ಸಲಹೆ ನೀಡಿದ್ದರು. ಅಲ್ಲದೆ ನೆರೆಹೊರೆಯವರು ತನ್ನ ಪೋಷಕರ ಜೊತೆ ಮಾತಾಡುವುದನ್ನೂ ಬಿಟ್ಟಿದ್ದಾರೆ. ಮುಸ್ಲಿಂ ಬಾಲಕಿಯ ಪರ ವಾದ ಮಂಡಿಸಲು ಮುಂದಾಗಿರುವುದು ದೇಶದ್ರೋಹದ ಕೃತ್ಯ ಎಂದು ಅವರ ಅಭಿಪ್ರಾಯವಾಗಿದೆ ಎಂದು ದೀಪಿಕಾ ಬೇಸರ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News