ಚಾಲಕ-ಪ್ರಯಾಣಿಕೆಯ ಜಗಳದಿಂದ ನದಿಗೆ ಬಿದ್ದ ಬಸ್: 13 ಮಂದಿ ಮೃತ್ಯು
Update: 2018-11-02 20:17 IST
ಬೀಜಿಂಗ್, ನ.2: ಮಹಿಳಾ ಪ್ರಯಾಣಿಕರೊಬ್ಬರು ಮತ್ತು ಚಾಲಕನ ನಡುವಿನ ಜಗಳದಿಂದ 13 ಮಂದಿ ಪ್ರಾಣ ಕಳೆದುಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಜಗಳದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇತುವೆಯಿಂದ ಧುಮುಕಿ ಚೀನಾದ ಅತೀ ಉದ್ದದ ನದಿ ಯಾಂಗ್ಝೆಗೆ ಬಿದ್ದಿದೆ.
13 ಮೃತದೇಹಗಳನ್ನು ಮೇಲಕ್ಕೆತ್ತಲಾಗಿದ್ದು, ಮೃತರ ಗುರುತು ಪತ್ತೆಯಾಗಿದೆ. ಇನ್ನಿಬ್ಬರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
42 ವರ್ಷದ ಪ್ರಯಾಣಿಕೆ ಲಿವೂ ನಿಲ್ದಾಣವೊಂದರಲ್ಲಿ ಇಳಿಯಲು ಬಯಸಿದ್ದರು. ಆದರೆ ನಿಲ್ದಾಣ ಬಂದಾಗ ಇಳಿದಿರಲಿಲ್ಲ. ತದನಂತರ ಆಕೆ ತಾನು ಇಳಿಯಬೇಕೆಂದು ತಿಳಿಸಿದಾಗ ಚಾಲಕ ನಿಲ್ಲಿಸಿಲ್ಲ. ಸಮೀಪದಲ್ಲಿ ಯಾವುದೇ ನಿಲ್ದಾಣ ಇಲ್ಲದ ಕಾರಣ ಚಾಲಕ ಬಸ್ಸನ್ನು ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಈ ಸಂದರ್ಭ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜಗಳ ಜೋರಾದಾಗ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದಕ್ಕೆ ಢಿಕ್ಕಿ ಹೊಡೆದು ಸೇತುವೆಯಿಂದ ನದಿಗೆ ಬಿದ್ದಿದೆ.