ಅಮಿತ್ ಶಾಗೆ ಊಟದ ಆತಿಥ್ಯ ನೀಡಿದ್ದ ರೈತ ಬಿಜೆಡಿಗೆ ಸೇರ್ಪಡೆ
ಭುವನೇಶ್ವರ, ನ.2: ಒಡಿಶಾದಲ್ಲಿ ಕಳೆದ ವರ್ಷ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ‘ಮಿಷನ್ 120’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭ ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದ ಒಡಿಶಾದ ಭೂರಹಿತ ರೈತ ನವೀನ್ ಸ್ವೈನ್ ಇದೀಗ ಆಡಳಿತಾರೂಢ ಬಿಜು ಜನತಾ ದಳ(ಬಿಜೆಡಿ)ಕ್ಕೆ ಸೇರ್ಪಡೆಗೊಂಡಿದ್ದಾನೆ.
ನವೀನ್ ಮನೆಗೆ ಮೂಲಭೂತ ಸೌಕರ್ಯ ಒದಗಿಸಿ ಜಮೀನು ಒದಗಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಭರವಸೆ ಈಡೇರಿಕೆಯತ್ತ ಗಮನವೇ ನೀಡದ ಬಿಜೆಪಿ ಮುಖಂಡರ ನಿಲುವಿನಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ನವೀನ್ ತಿಳಿಸಿದ್ದಾರೆ.
‘ನನ್ನ ಬೂತ್ ಬಲಿಷ್ಟವಾಗಿದೆ’ ಎಂಬ ಕಾರ್ಯಕ್ರಮದಡಿ ಗಂಜಾ ಜಿಲ್ಲೆಗೆ ಆಗಮಿಸಿದ್ದ ಶಾಗೆ ಹುಗುಲಪಟ್ಟ ಗ್ರಾಮದ ನವೀನ್ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಆಗ ನವೀನ್ ಮನೆಗೆ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರೂ ಇನ್ನೂ ಭರವಸೆ ಈಡೇರಿಲ್ಲ. ಆದರೆ ಇದೀಗ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ಣಾಯಕ್ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯದಿಂದ ಪ್ರೇರಿತನಾಗಿ ಬಿಜೆಡಿ ಸೇರ್ಪಡೆಗೆ ನಿರ್ಧರಿಸಿದ್ದೇನೆ ಎಂದು ನವೀನ್ ತಿಳಿಸಿದ್ದಾರೆ.
‘ಬಿಜು ಪಕ್ಕಾ(ಸದೃಢ) ನಿವಾಸ’ ಯೋಜನೆಯಡಿ ಉತ್ತಮ ಮನೆ ಮಂಜೂರುಗೊಳಿಸಿ ತನ್ನ ಹೆಸರಲ್ಲಿ ರೇಷನ್ ಕಾರ್ಡ್ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ. ಈಗಿರುವ ಮನೆ ಹರಕುಮುರುಕಾಗಿದ್ದು ವಿದ್ಯುತ್ ಸೌಕರ್ಯವಿಲ್ಲ. ಸೀಮೆಎಣ್ಣೆಯ ದೀಪದ ಬೆಳಕಲ್ಲಿ ತನ್ನ ಮೂವರು ಪುತ್ರರು ಶಾಲೆಯ ಅಭ್ಯಾಸ ನಡೆಸುತ್ತಿದ್ದಾರೆ. ತಾನು ಮತ್ತು ಪತ್ನಿ ಮತ್ತೊಬ್ಬರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇವೆ. 79 ವರ್ಷದ ತನ್ನ ತಂದೆ ತಿಂಗಳಿಗೆ 500 ರೂ. ಸಂಬಳಕ್ಕೆ ರಾತ್ರಿ ಕಾವಲುಗಾರ ಕೆಲಸ ಮಾಡುತ್ತಿದ್ದಾರೆ ಎಂದು ನವೀನ್ ತಿಳಿಸಿದ್ದಾರೆ.
ನವೀನ್ ಬಿಪಿಎಲ್ ವಿಭಾಗಕ್ಕೆ ಸೇರಿದ್ದರೂ ಅವರ ಹೆಸರು 2011ರ ಸಾಮಾಜಿಕ-ಆರ್ಥಿಕ ಗಣತಿಯಲ್ಲಿ ಸೇರ್ಪಡೆಗೊಂಡಿಲ್ಲ. ಅವರಿಗೆ ರೇಷನ್ ಕಾರ್ಡ್ ಕೂಡಾ ಸಿಕ್ಕಿಲ್ಲ. ಈ ಮಧ್ಯೆ , ಬಿಜೆಪಿಯ ಪೊಳ್ಳು ಭರವಸೆಗಳ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ ಎಂಬುದಕ್ಕೆ ನವೀನ್ ಬಿಜೆಡಿಗೆ ಸೇರ್ಪಡೆಗೊಂಡಿರುವುದು ಪುರಾವೆಯಾಗಿದೆ ಎಂದು ಬಿಜೆಡಿ ವಕ್ತಾರ ಸಸ್ಮಿತ್ ಪಾತ್ರ ಹೇಳಿದ್ದಾರೆ.