ತ್ರಿವಳಿ ತಲಾಖ್ ಆಧ್ಯಾದೇಶ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ನಿರಾಕರಣೆ
ಹೊಸದಿಲ್ಲಿ, ನ.2: ತ್ರಿವಳಿ ತಲಾಖ್ ಪದ್ದತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದ ಕೇಂದ್ರ ಸರಕಾರದ ಆಧ್ಯಾದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಮೇಲ್ಮನವಿಗಳನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಆಧ್ಯಾದೇಶದಲ್ಲಿ ಮಧ್ಯಪ್ರವೇಶಿಸಲು ತಾನು ಬಯಸುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ. ತ್ರಿವಳಿ ತಲಾಖ್ ಮಸೂದೆಗೆ ಸಂಸತ್ತಿನ ಅಂಗೀಕಾರ ಪಡೆಯಲು ವಿಫಲವಾದ ಬಳಿಕ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕು ರಕ್ಷಣೆ) ಆಧ್ಯಾದೇಶ, 2018ಕ್ಕೆ ಅನುಮೋದನೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್‌ನ ನ್ಯಾಯಪೀಠ, ಶೀಘ್ರದಲ್ಲೇ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಸದನ ಮರು ಸಮಾವೇಶಗೊಂಡ ಆರು ವಾರದೊಳಗೆ ಮಸೂದೆಗೆ ಅಂಗೀಕಾರ ಪಡೆಯಲು ಸರಕಾರ ವಿಫಲವಾದರೆ ಆಗ ಈ ಆಧ್ಯಾದೇಶ ರದ್ದಾಗುತ್ತದೆ ಎಂದು ತಿಳಿಸಿತು.
ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಹಾಗೂ ನ್ಯಾಯಾಧೀಶರಾದ ಕೆಎಂ ಜೋಸೆಫ್ ಮತ್ತು ಹೇಮಂತ್ ಗುಪ್ತಾ ಅವರಿದ್ದ ನ್ಯಾಯಪೀಠ ನಿರಾಕರಿಸಿದ ಬಳಿಕ ಅರ್ಜಿದಾರರು ಮೇಲ್ಮನವಿಯನ್ನು ವಾಪಾಸು ಪಡೆದರು.