ದಕ್ಷಿಣ ಭಾರತ ಚಲನಚಿತ್ರ ಲೇಖಕರ ಸಂಘಟನೆ ಅಧ್ಯಕ್ಷ ಸ್ಥಾನಕ್ಕೆ ಕೆ. ಭಾಗ್ಯರಾಜ್ ರಾಜೀನಾಮೆ
ಚೆನ್ನೈ, ನ. 1: ದಕ್ಷಿಣ ಭಾರತ ಚಲನಚಿತ್ರ ಲೇಖಕರ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಕೆ. ಭಾಗ್ಯರಾಜ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ಅಧಿಕಾರ ಸ್ವೀಕರಿಸಿದ್ದರು. ‘ಸರ್ಕಾರ್’ ಕೃತಿ ಚೌರ್ಯದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಸರ್ಕಾರ್’ ನಿರ್ದೇಶಕ ಎ.ಆರ್. ಮುರುಗದಾಸ್ ಕೃತಿ ಚೌರ್ಯ ಮಾಡಿದ್ದಾರೆ ಎಂದು ನಿರ್ದೇಶಕ ವರುಣ್ ರಾಜೇಂದ್ರನ್ ಆರೋಪಿಸಿದ್ದರು.
‘ಸರ್ಕಾರ್’ನ ಮುಖ್ಯ ಕಥಾವಸ್ತು ತನ್ನ ‘ಸೆಂಗೋಲ್’ ಚಲಚಿತ್ರದ ಕಥಾವಸ್ತುವಿಗೆ ಹೋಲಿಕೆಯಾಗುತ್ತಿದೆ ಎಂದು ರಾಜೇಂದ್ರನ್ ದಕ್ಷಿಣ ಭಾರತ ಚಲಚಿತ್ರ ಲೇಖಕರ ಸಂಘಟನೆ (ಎಸ್‌ಐಎಫ್‌ಡಬ್ಲುಎ)ಗೆ ದೂರು ನೀಡಿದ್ದರು. ಸಂಘಟನೆಯ ಅಧ್ಯಕ್ಷ ಭಾಗ್ಯರಾಜ್ ‘ಸರ್ಕಾರ್’ ಹಾಗೂ ‘ಸೆಂಗೋಲ್’ನ ಕಥಾವಸ್ತು ನಡುವೆ ಹೋಲಿಕೆ ಇದೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಹೇಳಿಕೆ ಬಿಡುಗಡೆ ಮಾಡಿರುವ ಭಾಗ್ಯರಾಜ್, ಮಾಧ್ಯಮಗಳಿಗೆ ಚಿತ್ರದ ಕಥಾ ಸಾರಾಂಶ ಬಿಡುಗಡೆ ಮಾಡಿರುವುದಕ್ಕೆ ಸನ್ ಪಿಕ್ಚರ್ಸ್‌ನ ಕ್ಷಮೆ ಕೋರಿದ್ದಾರೆ.
‘‘ಸಂಘಟನೆಯ ಗೌರವ ಹಾಗೂ ಕಲ್ಯಾಣವನ್ನು ಗಮನದಲ್ಲಿರಿಸಿ ನಾನು ಎದುರಿಸಿದ ಮುಜುಗರ ಹಾಗೂ ನನಗೆ ತಿಳಿದಿರುವ ಅಶಿಸ್ತನ್ನು ಬಹಿರಂಗಪಡಿಸುವುದಿಲ್ಲ’’ ಎಂದು ಭಾಗ್ಯರಾಜ್ ಹೇಳಿದ್ದಾರೆ. ‘‘ಮನವಿಯ ಹೊರತಾಗಿಯೂ ಮುರುಗದಾಸ್ ಸಮ್ಮತಿಸದೇ ಇರುವುದರಿಂದ ದೊಡ್ಡ ಸಂಸ್ಥೆ ಸನ್ ಪಿಕ್ಚರ್ಸ್, ಡೊಡ್ಡ ಸಿನೆಮಾ ಸರ್ಕಾರ್ ಕಥಾವಸ್ತುವನ್ನು ಬಹಿರಂಗಗೊಳಿಸಿದೆ. ನಾನು ತಪ್ಪು ಮಾಡಿದೆ. ನಾನು ಸನ್ ಪಿಕ್ಚರ್ಸ್‌ನಲ್ಲಿ ಕ್ಷಮೆ ಕೋರುತ್ತೇನೆ’’ ಎಂದು ಭಾಗ್ಯರಾಜ್ ಹೇಳಿದ್ದಾರೆ.