ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ನಾಯಕನ ಹತ್ಯೆ: ಭದ್ರತಾ ಅಧಿಕಾರಿಯ ಬಂಧನ

Update: 2018-11-02 17:15 GMT

ಹೊಸದಿಲ್ಲಿ, ಅ. 7: ಜಮ್ಮು ಹಾಗೂ ಕಾಶ್ಮೀರದ ಕಿಸ್ತ್‌ವಾರ್‌ನಲ್ಲಿ ಶಂಕಿತ ಉಗ್ರರು ಗುರುವಾರ ರಾತ್ರಿ ಬಿಜೆಪಿ ಮುಖಂಡ ಅನಿಲ್ ಪರಿಹರ್ ಮತ್ತವರ ಸಹೋದರ ಅಜಿತ್ ಪರಿಹರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಹಿನ್ನೆಲೆಯಲ್ಲಿ, ಅವರ ಭದ್ರತೆಗೆಂದು ನಿಯೋಜಿಸಲಾಗಿದ್ದ ಇಬ್ಬರು ಭದ್ರತಾ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಸಲು ಜಮ್ಮು ಹಾಗೂ ಕಾಶ್ಮೀರ ಸರಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರೂಪಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗುರುವಾರ ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹರ್ (52) ಹಾಗೂ ಅವರ ಸಹೋದರ ಅಜಿತ್ ಪರಿಹರ್ (55) ಅವರನ್ನು ಶಂಕಿತ ಉಗ್ರರು ಹತ್ಯೆಗೈದಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಭದ್ರತಾ ಅಧಿಕಾರಿಗಳಾದ ಓಂ ಪ್ರಕಾಶ್ ಹಾಗೂ ಸಾಹಿಲ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಿಸ್ತ್‌ವಾರ್‌ನ ಹಿರಿಯ ಪೊಲೀಸ್ ಅಧೀಕ್ಷಕ ರಾಜೀಂದರ್ ಗುಪ್ತಾ ತಿಳಿಸಿದ್ದಾರೆ.

ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹರ್‌ಗೆ ಭದ್ರತೆ ಒದಗಿಸಲಾಗಿತ್ತು. ಆದರೆ, ಘಟನೆ ನಡೆದ ಸಂದರ್ಭ ಇಬ್ಬರು ಭದ್ರತಾ ಸಿಬ್ಬಂದಿ ಅವರ ಜೊತೆಯಲ್ಲಿ ಇರಲಿಲ್ಲ ಎಂದು ಕಿಸ್ತ್‌ವಾರ್ ಕಿಸ್ತ್‌ವಾರ್‌ನ ಜಿಲ್ಲಾಧಿಕಾರಿ ಅಂಗ್ರೇಜ್ ಸಿಂಗ್ ರಾಣಾ ತಿಳಿಸಿದ್ದಾರೆ. ‘‘ಈ ಹತ್ಯೆ ಪ್ರಕರಣದ ತನಿಖೆಗೆ ಉಪ ಪೊಲೀಸ್ ಅಧೀಕ್ಷಕ ಪ್ರಬೀತ್ ಸಿಂಗ್ ನೇತೃತ್ವದಲ್ಲಿ ಸಿಟ್ ರೂಪಿಸಲಾಗಿದೆ.’’ ಎಂದು ಅವರು ಹೇಳಿದ್ದಾರೆ. ಭದ್ರತಾ ಅಧಿಕಾರಿಗಳು ಅವರ ಜತೆಗಿದ್ದಿದ್ದರೆ ಈ ದುರ್ಘಟನೆ ತಪ್ಪಿಸಬಹುದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News