ತೂಕ ಇಳಿಸಿಕೊಳ್ಳಬೇಕೇ? ಹಾಗಿದ್ದರೆ ಜೀರಿಗೆಯನ್ನು ಬಳಸಿ

Update: 2018-11-03 11:52 GMT

ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿರುವ ಸಂಬಾರ ವಸ್ತು ಜೀರಿಗೆ ಶರೀರದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ ಎನ್ನುವುದು ನಿಮಗೆ ಗೊತ್ತೇ?

ಹೌದು,ಕೇವಲ 20 ದಿನಗಳ ಕಾಲ ಪ್ರತಿದಿನ ನಿಯಮಿತವಾಗಿ ಜೀರಿಗೆಯನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು ಮತ್ತು ನಿಮ್ಮ ಒಟ್ಟಾರೆ ದೇಹತೂಕವನ್ನು ತಗ್ಗಿಸಿಕೊಳ್ಳಬಹುದು.

ಶರೀರದ ತೂಕವನ್ನು ಕಡಿಮೆ ಮಾಡುವಲ್ಲಿ ಜೀರಿಗೆ ಅತ್ಯಂತ ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಅದು ಚಯಾಪಚಯ ದರ ಮತ್ತು ಪಚನಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕ್ಯಾಲೊರಿಗಳನ್ನು ತ್ವರಿತವಾಗಿ ದಹಿಸಲು ನೆರವಾಗುತ್ತದೆ. ಶರೀರದ ತೂಕವನ್ನು ಕಡಿಮೆ ಮಾಡುವ ಸಾಮರ್ಥ್ಯದ ಜೊತೆಗೆ ಇತರ ಹಲವಾರು ಆರೋಗ್ಯಲಾಭಗಳನ್ನೂ ಜೀರಿಗೆಯು ನೀಡುತ್ತದೆ. ಅದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ,ಹೃದಯಾಘಾತವನ್ನು ತಡೆಯುತ್ತದೆ,ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,ರಕ್ತಹೀನತೆಗೆ ಚಿಕಿತ್ಸೆ ನೀಡುತ್ತದೆ,ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ,ವಾಯು ಉತ್ಪತ್ತಿ ಮತ್ತು ಹೊಟ್ಟೆಯುಬ್ಬರವನ್ನು ತಡೆಯುತ್ತದೆ.

ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ಜೀರಿಗೆಯು ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ರತಿನಿತ್ಯ ಜೀರಿಗೆಯನ್ನು ಸೇವಿಸಿದರೆ ಈ ಅದ್ಭುತ ಫಲಿತಾಂಶವನ್ನು ಅನುಭವಿಸಬಹುದು. ಶರೀರದ ತೂಕವನ್ನು ಇಳಿಸಿಕೊಳ್ಳಲು ಜೀರಿಗೆಯ ಬಳಕೆಯ ವಿಧಾನಗಳು ಹೀಗಿವೆ.......

ಎರಡು ಟೇಬಲ್‌ಸ್ಪೋನ್ ಜೀರಿಗೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಕುದಿಸಿ,ಸೋಸಿದ ಬಳಿಕ ಅರ್ಧ ಲಿಂಬೆಹಣ್ಣಿನ ರಸವನ್ನು ಬೆರೆಸಿ. ಶೀಘ್ರ ಪರಿಣಾಮಕ್ಕಾಗಿ ಎರಡು ವಾರಗಳ ಕಾಲ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ಕಷಾಯವನ್ನು ಸೇವಿಸಿ.

ಶರೀರದ ತೂಕವನ್ನು ಇಳಿಸಿಕೊಳ್ಳಲು ಸಾಸಿವೆಯನ್ನು ಇತರ ಹಲವಾರು ರೂಪಗಳಲ್ಲಿಯೂ ಸೇವಿಸಬಹುದು. ಒಂದು ಟೇಬಲ್‌ಸ್ಪೂನ್ ಜೀರಿಗೆ ಹುಡಿಯನ್ನು ಐದು ಗ್ರಾಂ ಮೊಸರಿನೊಂದಿಗೆ ಬೆರೆಸಿಕೊಂಡು ಪ್ರತಿದಿನ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.

 ಮೂರು ಗ್ರಾಂ ಜೀರಿಗೆ ಹುಡಿಯನ್ನು ನೀರು ಮತ್ತು ಕೆಲವು ಹನಿ ಜೇನಿನೊಂದಿಗೆ ಬೆರೆಸಿ ಸೇವಿಸಬಹುದು. ವೆಜಿಟೇಬಲ್ ಸೂಪ್ ತಯಾರಿಸಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಜೀರಿಗೆ ಹುಡಿಯನ್ನು ಸೇರಿಸಿ,ಇದಕ್ಕೆ ಕಂದು ಅನ್ನವನ್ನು ಸೇರಿಸಿದರೆ ರುಚಿಯು ಹೆಚ್ಚುವುದರ ಜೊತೆಗೆ ತೂಕ ಇಳಿಸುವ ಸಾಮರ್ಥ್ಯವೂ ಹೆಚ್ಚುತ್ತದೆ.

► ಜೀರಿಗೆಯೊಂದಿಗೆ ಲಿಂಬೆ ಮತ್ತು ಶುಂಠಿಯ ಬಳಕೆ

ಇದು ತೂಕ ಇಳಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲೊಂದಾಗಿದೆ. ಶುಂಠಿ ಮತ್ತು ಲಿಂಬೆ ಜೀರಿಗೆಯ ತೂಕ ಇಳಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಕ್ಯಾರಟ್ ಮತ್ತು ಇತರ ತರಕಾರಿಗಳನ್ನು ನೀರಿನಲ್ಲಿ ಕುದಿಸಿ,ಅವುಗಳ ಮೇಲೆ ಸ್ವಲ್ಪ ಜೀರಿಗೆ ಹುಡಿಯನ್ನು ಹಾಕಿ,ಲಿಂಬೆ ರಸ,ತುರಿದ ಶುಂಠಿಯನ್ನು ಬೆರೆಸಿ. ಊಟದೊಂದಿಗೆ ಈ ಖಾದ್ಯವನ್ನು ಬಳಸಿ.

► ಜೀರಿಗೆ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ

ಜೀರಿಗೆಯು ಶರೀರದಲ್ಲಿಯ ಹೆಚ್ಚುವರಿ ಕ್ಯಾಲೊರಿಗಳನ್ನು ದಹಿಸಲು ನೆರವಾಗುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಅದರಲ್ಲಿರುವ ಪೌಷ್ಟಿಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕ್ಯಾಲೊರಿಗಳನ್ನು ದಹಿಸಲು ಶರೀರಕ್ಕೆ ನೆರವಾಗುತ್ತವೆ ಮತ್ತು ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸುತ್ತವೆ.

► ಜೀರಿಗೆ ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ವಾಯುವನ್ನು ತಡೆಯುತ್ತದೆ

ಜೀರಿಗೆ ನಾವು ಸೇವಿಸಿದ ಆಹಾರ ಸಮರ್ಪಕವಾಗಿ ಜೀರ್ಣಗೊಳ್ಳಲು ನೆರವಾಗುವ ಮೂಲಕ ವಾಯು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಹೊಟ್ಟೆಯುಬ್ಬರ ಮತ್ತು ವಾಯು ಸೇರುವುದು ಅಜೀರ್ಣದಿಂದುಂಟಾಗುವ ಸಾಮಾನ್ಯ ಸಮಸ್ಯೆಗಳಾಗಿವೆ. ಜೀರಿಗೆಯು ಆಹಾರವು ಸಂಪೂರ್ಣವಾಗಿ ಜೀರ್ಣಗೊಳ್ಳಲು ನೆರವಾಗುವ ಮೂಲಕ ಹೊಟ್ಟೆಯಲ್ಲಿ ಮತ್ತು ಕರುಳಿನಲ್ಲಿ ವಾಯು ಸಂಗ್ರಹವಾಗುವುದನ್ನು ತಡೆಯುತ್ತದೆ.

► ಹೃದಯಾಘಾತವನ್ನೂ ತಡೆಯುತ್ತದೆ

ಶರೀರವು ಆಹಾರದ ಮೂಲಕ ಕೆಟ್ಟ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವುದನ್ನು ಜೀರಿಗೆಯು ತಡೆಯುತ್ತದೆ. ಹೀಗಾಗಿ ಶರೀರದ ತೂಕವನ್ನು ಇಳಿಸುವ ಜೊತೆಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಗಳನ್ನೂ ದೂರಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News