9ನೆ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಲು ಯತ್ನಿಸಿದ ಶಿಕ್ಷಕ
ಹೈದರಾಬಾದ್, ನ.3: ತನ್ನ ಅನುಚಿತ ವರ್ತನೆಗೆ ಆಕ್ಷೇಪಿಸಿದ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯ ಕತ್ತನ್ನು ಬ್ಲೇಡ್ ನಿಂದ ಸೀಳಲು ಶಾಲಾ ಶಿಕ್ಷಕನೊಬ್ಬ ಯತ್ನಿಸಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಘಟನೆಯ ನಂತರ ಆರೋಪಿ ತನ್ನ ಕತ್ತನ್ನು ತಾನೇ ಸೀಳಿ ಆತ್ಮಹತ್ಯೆಗೈಯ್ಯಲು ಯತ್ನಿಸಿದ್ದಾನೆ. ಆರೋಪಿಯನ್ನು ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯ ಬಂಗಾರುಪೇಟೆ ಎಂಬಲ್ಲಿರುವ ರಾಕ್ವೆಲ್ ಹೈಸ್ಕೂಲಿನ ಹಿಂದಿ ಶಿಕ್ಷಕ ಶಂಕರ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಕ್ಷಕ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆಂದು ಬಾಲಕಿ ತನ್ನ ತಾಯಿಯಲ್ಲಿ ದೂರಿದ್ದರಿಂದ ಆಕೆಯ ತಾಯಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಇದರಿಂದ ಆಕ್ರೋಶಿತನಾಗಿದ್ದ ಶಿಕ್ಷಕ ಇಂದು ಬೆಳಿಗ್ಗೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಬಂದು ಆಕೆಯ ಕತ್ತು ಸೀಳಿ ಕೊಲೆಗೈಯ್ಯಲು ಯತ್ನಿಸಿದಾಗ ಬಾಲಕಿ ಬೊಬ್ಬಿಟ್ಟಿದ್ದಳು, ಆಗ ಆರೋಪಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಧಾವಿಸಿ ಆತನಿಗೆ ಚೆನ್ನಾಗಿ ಥಳಿಸಿದ್ದರು. ಘಟನೆ ನಡೆದಾಗ ಆರೋಪಿ ಮದ್ಯದ ನಶೆಯಲ್ಲಿದ್ದನೆಂದು ತಿಳಿದು ಬಂದಿದೆ.
ಆರೋಪಿ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಘಂಟ ಶ್ರೀನಿವಾಸ್ ತಿಳಿಸಿದ್ದಾರೆ.