ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿಗೆ ಅರ್ನಬ್ ಗೋಸ್ವಾಮಿ ಸೇರಿ ನಾಲ್ವರ ನೇಮಕ

Update: 2018-11-03 12:54 GMT

ಹೊಸದಿಲ್ಲಿ, ನ.3: ದಿಲ್ಲಿಯ ತೀನ್ ಮೂರ್ತಿ ಕಾಂಪ್ಲೆಕ್ಸ್‍ನಲ್ಲಿ ಎಲ್ಲಾ ಪ್ರಧಾನಿಗಳಿಗಾಗಿ ಮ್ಯೂಸಿಯಂ ಸ್ಥಾಪಿಸುವ ಕೇಂದ್ರದ ನಿರ್ಧಾರವನ್ನು ಟೀಕಿಸಿರುವ ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರೆರಿ ಸೊಸೈಟಿ ಮೂವರು ಸದಸ್ಯರ ಬದಲು ಕೇಂದ್ರ ಹೊಸಬರನ್ನು ನೇಮಿಸಿದ್ದು, ಅವರಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್ ಜೈ ಶಂಕರ್, ಬಿಜೆಪಿ ಸಂಸದ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಅಧ್ಯಕ್ಷ ವಿನಯ್ ಸಬಸ್ರಬುದ್ಧೆ ಹಾಗೂ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಅಧ್ಯಕ್ಷ  ರಾಮ್ ಬಹಾದುರ್ ರೈ ಸೇರಿದ್ದಾರೆ.

ಅರ್ಥಶಾಸ್ತ್ರಜ್ಞ ನಿತಿನ್ ದೇಸಾಯಿ, ಪ್ರೊಫೆಸರ್ ಉದಯನ್ ಮಿಶ್ರಾ ಹಾಗೂ ಮಾಜಿ ಅಧಿಕಾರಿ ಬಿ.ಪಿ. ಸಿಂಗ್ ಇನ್ನು ಮುಂದೆ ಸೊಸೈಟಿ ಸದಸ್ಯರಾಗಿರುವುದಿಲ್ಲ ಎಂದು ಕೇಂದ್ರ ಸರಕಾರದ ಅಧಿಸೂಚನೆ ತಿಳಿಸಿದೆ. ಹೊಸದಾಗಿ ನೇಮಕಗೊಂಡ ಸದಸ್ಯರು ಎಪ್ರಿಲ್ 25, 2020ರ ತನಕ ಅಧಿಕಾರದಲ್ಲಿರುತ್ತಾರೆ.

ಇದೀಗ ತಮ್ಮ ಸದಸ್ಯತನ ಕಳೆದುಕೊಂಡವರಲ್ಲಿ ಸಿಂಗ್ ಹಾಗೂ ಮಿಶ್ರಾ  ಅವರು ಮಾಜಿ ಪ್ರಧಾನಿಗಳ ಮ್ಯೂಸಿಯಂ ಸ್ಥಾಪನೆಗೆ ತಮ್ಮ ಆಕ್ಷೇಪವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಇಂತಹ ಕ್ರಮ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಮ್ಯೂಸಿಯಂ ಸ್ಥಾಪನೆಗೂ ಕಾರಣವಾಗಬಹುದು ಎಂದು ಅವರು ಹೇಳಿದ್ದರು. ಮ್ಯೂಸಿಯಂ ಸ್ಥಾಪನೆಗೆ ಆಯ್ದುಕೊಳ್ಳಲಾದ ಸ್ಥಳದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು.

#ಮೀಟೂ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರು ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಲೈಬ್ರೆರಿ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News