ಡಿಸೆಂಬರ್‌ನಲ್ಲಿ ಪರಸ್ಪರ ಒಮ್ಮತದಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ: ವಿಎಚ್‌ಪಿ

Update: 2018-11-03 13:45 GMT

ಹೊಸದಿಲ್ಲಿ, ನ.3: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಶಾಸನ ಅಥವಾ ಸುಗ್ರೀವಾಜ್ಞೆಯಿಂದಲ್ಲ, ಪರಸ್ಪರ ಒಮ್ಮತದಿಂದ ಡಿಸೆಂಬರ್‌ನಲ್ಲಿ ಆರಂಭಗೊಳ್ಳಲಿದೆ ಎಂದು ವಿಶ್ವಹಿಂದು ಪರಿಷದ್ (ವಿಎಚ್‌ಪಿ) ಮುಖಂಡ ರಾಮ್‌ವಿಲಾಸ್ ವೇದಾಂತಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕೇಂದ್ರ ಸರಕಾರ ಕಾನೂನನ್ನು ರೂಪಿಸಬೇಕೆಂದು ಆರೆಸ್ಸೆಸ್ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ ಮರುದಿನ ಹೇಳಿಕೆ ನೀಡಿರುವ ವೇದಾಂತಿ , ಅಯೋಧ್ಯೆಯಲ್ಲಿ ಮುಂದಿನ ಡಿಸೆಂಬರ್‌ನಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ತಾನು ಆರಂಭಿಸಲಿದ್ದೇನೆ. ಇದೇ ವೇಳೆ ಲಕ್ನೋದಲ್ಲಿ ಮಸೀದಿಯನ್ನು ನಿರ್ಮಿಸಬಹುದು ಎಂದಿದ್ದಾರೆ. ಅಖಿಲ ಭಾರತೀಯ ಸಂತ ಸಮಿತಿ ಆಯೋಜಿಸಿರುವ ‘ಧರ್ಮಾದೇಶ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

 “ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಸಚಿವರು, ಸಂಸದರು , ಶಾಸಕರು ಎಲ್ಲರೂ ಮಂದಿರ ನಿರ್ಮಾಣವಾಗಬೇಕೆಂದು ಬಯಸುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಶಾಸನ ಜಾರಿಗೊಳಿಸಿದರೆ ಕೋಮು ಗಲಭೆಯನ್ನು ತಡೆಯಲು ಆಗದು. ನಾವು ಶಾಂತಿಪ್ರಿಯರು. ಹಿಂಸಾಚಾರವನ್ನು ಬಯಸುವುದಿಲ್ಲ” ಎಂದು ವೇದಾಂತಿ ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉತ್ತರಾಖಂಡದ ಸ್ವಾಮಿ ವಿವೇಕಾನಂದ ಎಂಬವರು ಪ್ರಧಾನಿ ಮೋದಿ ರಾಮನ ಅವತಾರ ಎಂದು ಬಣ್ಣಿಸಿದರು. ಮೋದಿಯ ಆಡಳಿತಾವಧಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದಿದ್ದರೆ ಅದೊಂದು ದೊಡ್ಡ ಅಚ್ಚರಿಯಾಗಲಿದೆ ಎಂದವರು ಹೇಳಿದರು.

ಸ್ವಾಮಿ ಹಂಸದೇವಾಚಾರ್ಯ ಮಾತನಾಡಿ, ಸೋಮನಾಥ ದೇವಸ್ಥಾನದ ರೀತಿಯಲ್ಲೇ ರಾಮಮಂದಿರವೂ ನಿರ್ಮಾಣವಾಗಬೇಕು ಎಂದರು. ಅಲ್ಲದೆ ಜನಸಂಖ್ಯೆಯ ಕುರಿತ ಕಾರ್ಯನೀತಿಯೊಂದು ಅಗತ್ಯವಿದ್ದು ಈ ನಿಟ್ಟಿನಲ್ಲಿ ಚರ್ಚೆ ನಡೆಯಬೇಕು. ಎಲ್ಲಾ ರಾಜ್ಯಗಳಲ್ಲೂ ರಾಷ್ಟ್ರೀಯ ಪೌರರ ನೋಂದಣಿ ದಾಖಲೆ ಸಿದ್ಧವಾಗಬೇಕು ಎಂದು ಹೇಳಿದ ಅವರು, ಒಳನುಸುಳಿ ಬಂದವರಿಗೆ ಉದ್ಯೋಗ ಹಾಗೂ ಜಾತಿ ಪ್ರಮಾಣಪತ್ರ ನೀಡುವುದು ದೇಶದ್ರೋಹದ ಕೃತ್ಯಕ್ಕೆ ಸಮಾನವಾಗಿದೆ. ಇಂತಹ ಕೃತ್ಯಗಳಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News