ಮಾನವ ಹಕ್ಕುಗಳ ಮಂಡಳಿಯ ಕಾರ್ಯ ವಿವಾದಾಸ್ಪದವಾಗುತ್ತಿದೆ: ಭಾರತ

Update: 2018-11-03 16:45 GMT

ವಿಶ್ವಸಂಸ್ಥೆ,ನ.3: ಮಾನವ ಹಕ್ಕುಗಳ ಮಂಡಳಿಯ ಕಾರ್ಯಗಳು ಹೆಚ್ಚು ವಿವಾದಾಸ್ಪದ ಮತ್ತು ಕಠಿಣವಾಗುತ್ತಿವೆ ಎಂದು ವಿಷಾದಿಸಿರುವ ಭಾರತವು,ವಿದೇಶ ನೀತಿಯ ಸಾಧನವಾಗಿ ಮಾನವ ಹಕ್ಕುಗಳ ರಾಜಕೀಕರಣದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.

ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯಅಧಿವೇಶನದಲ್ಲಿ ಮಾನವ ಹಕ್ಕುಗಳ ಮಂಡಳಿಯ ವರದಿ ಕುರಿತು ಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಉಪ ಕಾಯಂ ಪ್ರತಿನಿಧಿಯಾಗಿರುವ ರಾಯಭಾರಿ ತನ್ಮಯ ಲಾಲ್ ಅವರು, ಹೆಚ್ಚುತ್ತಿರುವ ನಿರ್ಣಯಗಳು ಮತ್ತು ನಿರ್ಧಾರಗಳು ಹಾಗೂ ಸಭೆಗಳು ಮತ್ತು ವಿಶೇಷ ಅಧಿವೇಶನಗಳೊಂದಿಗೆ ಮಾನವ ಹಕ್ಕುಗಳ ಮಂಡಳಿಯು ತನ್ನ ಹರವನ್ನು ಹೆಚ್ಚಿಸಿಕೊಳ್ಳುತ್ತಿದ್ದರೂ ಅದರ ಕಾರ್ಯದ ಪರಿಣಾಮಕಾರಿತ್ವವು ಸದಾ ಸ್ಪಷ್ಟವಾಗಿಲ್ಲ ಎಂದು ಹೇಳಿದರು.

ಸರ್ವರಿಗೂ ಸ್ವೀಕಾರಾರ್ಹ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಗಳ ನಿಷ್ಕ್ರಿಯತೆಯಿಂದಾಗಿ ಬಹುಪಕ್ಷೀಯವಾದಕ್ಕೆ ಎದುರಾಗಿರುವ ಹಲವಾರು ಸವಾಲುಗಳ ಕುರಿತು ಕಳವಳಗಳು ಹೆಚ್ಚುತ್ತಿರುವುದರೊಂದಿಗೆ ಇಂದು ಜಾಗತಿಕ ಸ್ಥಿತಿಯು ಸಂಕಷ್ಟದಲ್ಲಿದೆ ಎಂದ ಅವರು,ಮಾನವ ಹಕ್ಕುಗಳ ಕಾರ್ಯಸೂಚಿಯ ಕುರಿತು ಚರ್ಚೆಗಳನ್ನು ಅವರಿಸಿಕೊಂಡಿರುವ ಹಲವಾರು ಸಮಸ್ಯೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವುದು ಕಷ್ಟವೇನಲ್ಲ. ಸದಸ್ಯ ರಾಷ್ಟ್ರಗಳ ವಿಭಿನ್ನ ಆದ್ಯತೆಗಳು ಮತ್ತ ಕಾಳಜಿಗಳು ಹೆಚ್ಚಾಗಿ ಈ ಸಮಸ್ಯೆಗಳಿಗೆ ಕಾರಣವಾಗಿವೆ ಎಂದರು.

ಈ ವರ್ಷದ ಜೂನ್‌ನಲ್ಲಿ ಕಾಶ್ಮೀರ ಕುರಿತು ಆಗಿನ ಮಾನವ ಹಕ್ಕುಗಳ ರಾಯಭಾರಿ ಝೈದ್ ರಾಅದ್ ಅಲ್ ಹುಸೇನ್ ಅವರ ವರದಿಯನ್ನು ಭಾರತವು ತಿರಸ್ಕರಿಸಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಸ್ಥಿತಿಯ ಕುರಿತು ಸ್ವತಂತ್ರ ಅಂತರರಾಷ್ಟ್ರೀಯ ತನಿಖೆಗೆ ಹುಸೇನ್ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News